ಏರ್ ಇಂಡಿಯಾ ವಿಮಾನ ದುರಂತ ಡಿಎನ್ಎ ಹೋಲಿಕೆ ಪ್ರಕ್ರಿಯೆ ಪೂರ್ಣ

PC : PTI
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ 16 ದಿನಗಳ ಬಳಿಕ ಅಧಿಕಾರಿಗಳು ಡಿಎನ್ಎ ಹೋಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಅಂತಿಮವಾಗಿ ಗುರುತು ಸಿಗದ 32 ವರ್ಷದ ಗುಜರಾತ್ ಭುಜ್ನ ಪ್ರಯಾಣಿಕನ ಡಿಎನ್ಎ ಶನಿವಾರ ರಾತ್ರಿ ಹೋಲಿಕೆಯಾಗಿದೆ. ಇದರೊಂದಿಗೆ 241 ಪ್ರಯಾಣಿಕರು ಹಾಗೂ ಸಿಬ್ಬಂದಿ, 16 ಪ್ರಯಾಣಿಕರಲ್ಲದವರು ಸೇರಿದಂತೆ ಮೃತಪಟ್ಟ ಎಲ್ಲಾ 260 ಪ್ರಯಾಣಿಕರ ಗುರುತು ಪತ್ತೆಯಾಗಿದೆ.
ದುರಂತಕ್ಕೀಡಾದ ಈ ವಿಮಾನದಲ್ಲಿದ್ದ ಭುಜ್ನ ದಹೀನ್ಸರ್ ನಿವಾಸಿ ಅನಿಲ್ ಲಾಲ್ಜಿ ಖಿಮಾನಿ ಅವರ ಡಿಎನ್ಎ ಗುರುತಿಸುವಿಕೆಯನ್ನು ಅಂತಿಮವಾಗಿ ಕೈಗೊಳ್ಳಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ, ಡಿಎನ್ಎ ಹೋಲಿಕೆಯಲ್ಲಿ ವಿಳಂಬವಾದ ಕಾರಣ ಅವರ ಮೃತದೇಹವನ್ನು ಈ ಮೊದಲು ದೃಢೀಕರಿಸಲು ಆಗಿರಲಿಲ್ಲ.
ಅವರ ತಂದೆ ಲಾಲ್ಜಿಭಾ ಖಿಮಾನಿ ಅವರು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಥವಾ ಮೃತದೇಹದ ಗುರುತು ಸಿಗದೇ ಇದ್ದರೆ ಇನ್ನಷ್ಟು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಜೂನ್ 27ರಂದು ಗುರುತು ದೃಢಪಟ್ಟ ಬಳಿಕ ಆಸ್ಪತ್ರೆ ಅವರ ಕುಟುಂಬಕ್ಕೆ ಮಾಹಿತಿ ನೀಡಿತ್ತು ಹಾಗೂ ಮೃತದೇಹವನ್ನು ಹಸ್ತಾಂತರಿಸಿತ್ತು.
ಸಿವಿಲ್ ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಕಾಶ್ ಜೋಷಿ ಅವರ ಪ್ರಕಾರ, ಅನಿಲ್ ಅವರ ಮೃತದೇಹ ಸೇರಿದಂತೆ ಇದುವರೆಗೆ 260 ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ‘‘ನಾವು ಈ ಹಿಂದೆ 240 ಪ್ರಯಾಣಿಕರ ಮೃತದೇಹದ ಡಿಎನ್ಎ ಹೋಲಿಕೆಯನ್ನು ಪೂರ್ಣಗೊಳಿಸಿದ್ದೆವು. ಉಳಿದ ಒಂದು ಮೃತದೇಹದ ಡಿಎನ್ಎ ಹೋಲಿಕೆಯನ್ನು ನಿನ್ನೆ ರಾತ್ರಿ ಪೂರ್ಣಗೊಳಿಸಿದ್ದೇವೆ. ಇದರೊಂದಿಗೆ ಗುರುತಿಸುವಿಕೆಯ ಪ್ರಕ್ರಿಯೆ ಪೂರ್ಣಗೊಂಡಿದೆ’’ ಎಂದು ಅವರು ತಿಳಿಸಿದ್ದಾರೆ.
254 ಪ್ರಕರಣಗಳಲ್ಲಿ ಡಿಎನ್ಎ ಗುರುತಿಸುವಿಕೆಯನ್ನು ಬಳಸಲಾಗಿದೆ. 6 ಮೃತದೇಹಗಳನ್ನು ಮುಖದ ಮೂಲಕ ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







