ಏರ್ಇಂಡಿಯಾ ದುರಂತದ ಕೆಲವೇ ತಾಸುಗಳ ಮುನ್ನ ಗುಜರಾತಿ ಪತ್ರಿಕೆಯಲ್ಲಿ ಕಟ್ಟಡದ ಮೇಲೆ ವಿಮಾನ ಲ್ಯಾಂಡಿಂಗ್ ನ ಜಾಹೀರಾತು!

PC : X \ @warrior_nii
ಅಹ್ಮದಾಬಾದ್: ಗುಜರಾತಿ ಭಾಷೆಯ ಜನಪ್ರಿಯ ಏರುಹೊತ್ತಿನ ದೈನಿಕ ಮಿಡ್ಡೇನಲ್ಲಿ ಜೂನ್ 12ರಂದು ಮೊದಲಪುಟದಲ್ಲಿ ಅಹ್ಮದಾಬಾದ್ ನ ಮನರಂಜನಾ ಕೇಂದ್ರ ‘ಕಿಡ್ ಝಾನಿಯಾ’ದ ಜಾಹೀರಾತೊಂದು ಪ್ರಕಟವಾಗಿತ್ತು. ಕೇಂದ್ರದಲ್ಲಿ ಜೂನ್ 13ರಿಂದ 15ರವರೆಗೆ ನಡೆಯುವ ತಂದೆಯಂದಿರ ದಿನಾಚರಣೆಯ ಅಂಗವಾಗಿ ಈ ಜಾಹೀರಾತನ್ನು ಪ್ರಕಟಿಸಲಾಗಿತ್ತು.
ಏರ್ಇಂಡಿಯಾದ ವಿಮಾನವೊಂದು ಸುಂದರವಾದ ನಗರದಲ್ಲಿ ಕೆಳಮಟ್ಟದಲ್ಲಿ ಹಾರುತ್ತಾ, ಕಟ್ಟಡವೊಂದರ ಮೇಲೆ ಲ್ಯಾಂಡಿಂಗ್ ಆಗಿರುವಂತೆ ಈ ಜಾಹೀರಾತಿನಲ್ಲಿ ತೋರಿಸಲಾಗಿತ್ತು. ಕಿಡ್ ಝಾನಿಯಾದಲ್ಲಿರುವ ವಿಮಾನಯಾನ ಥೀಮ್ ನ ಅನುಭವಗಳ ಬಗ್ಗೆ ಬೆಳಕು ಚೆಲ್ಲುವುದೇ ಈ ಜಾಹೀರಾತಿನ ಉದ್ದೇಶವಾಗಿತ್ತು. ಈ ಥೀಮ್ ಪಾರ್ಕ್ ನಲ್ಲಿ ಮಕ್ಕಳು ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿಯಂತೆ ಪಾತ್ರವಹಿಸಲು ಅವಕಾಶವಿತ್ತು.
ಆದರೆ ಈ ಜಾಹೀರಾತು ಓದುಗರಿಗೆ ತಲುಪಿದ ಕೆಲವೇ ತಾಸುಗಳ ಬಳಿಕ ನೈಜ ದುರಂತವೊಂದು ನಡೆಯಿತು. ಅಹ್ಮದಾಬಾದ್ ನ ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾದ ಎಐ171 ಬೋಯಿಂಗ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿತ್ತು.
ಪತನಗೊಂಡ ವಿಮಾನದ ಹಿಂಭಾಗವು ಕಟ್ಟಡದ ಮೇಲೆ ಹರಡಿಬಿದ್ದಿರುವ ದೃಶ್ಯವು ಹೆಚ್ಚುಕಮ್ಮಿ ಈ ಜಾಹೀರಾತನ್ನೇ ಹೋಲುತ್ತಿದೆ. ಕಿಡ್ ಝಾನಿಯಾ ಜಾಹೀರಾತಿನಲ್ಲಿರುವ ಚಿತ್ರಕ್ಕೂ, ಏರ್ಇಂಡಿಯಾದ ನೈಜ ದುರಂತದ ದೃಶ್ಯಕ್ಕೂ ಸಾದೃಶತೆ ಇರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.







