ಏರ್ ಇಂಡಿಯಾ ದುರಂತ: ತನಿಖೆಗೆ ವಿಶ್ವಸಂಸ್ಥೆ ಏಜೆನ್ಸಿಯ ನೆರವು ಪಡೆಯಲು ಕೇಂದ್ರ ಸರಕಾರ ನಕಾರ

PC : PTI
ಹೊಸದಿಲ್ಲಿ: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಇತ್ತೀಚೆಗೆ 260ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಏರ್ಇಂಡಿಯಾ ವಿಮಾನದ ದುರಂತದ ತನಿಖೆಗೆ ನೆರವು ನೀಡುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆಯ ಕೊಡುಗೆಯನ್ನು ಭಾರತವು ನಿರಾಕರಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ವಿಮಾನ ಅವಘಡದ ಕಾರಣವನ್ನು ಪತ್ತೆಹಚ್ಚುವಲ್ಲಿ ಮಹತ್ವದ ಪಾತ್ರವಹಿಸುವ ಬ್ಲ್ಯಾಕ್ ಬಾಕ್ಸ್ ನ ದತ್ತಾಂಶಗಳ ವಿಶ್ಲೇಷಣೆಯು ವಿಳಂಬವಾಗಲಿದೆಯೆಂದು ಸುರಕ್ಷತಾ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಹ್ಮದಾಬಾದ್ ನಲ್ಲಿ ಜೂನ್ 12ರಂದು ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ಅವಘಡದ ತನಿಖೆಯಲ್ಲಿ ನೆರವಾಗಲು ತನ್ನ ತನಿಖಾಧಿಕಾರಿಯೊಬ್ಬರನ್ನು ಒದಗಿಸುವ ಕೊಡುಗೆಯನ್ನು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆಯು ಭಾರತಕ್ಕೆ ನೀಡಿತ್ತು.
ಈ ಹಿಂದೆ ವಿಶ್ವಸಂಸ್ಥೆಯ ಈ ವೈಮಾನಿಕ ಏಜೆನ್ಸಿಯು 2014ರ ಮಲೇಶ್ಯ ವಿಮಾನ ಪತನ ಹಾಗೂ 2020ರ ಉಕ್ರೇನ್ ಜೆಟ್ ಲೈನರ್ ಪತನದಂತಹ ಕೆಲವು ನಿರ್ದಿಷ್ಟ ವಿಮಾನ ದುರಂತಗಳ ತನಿಖೆಯಲ್ಲಿ ನೆರವಾಗಲು ತನಿಖಾಧಿಕಾರಿಗಳನ್ನು ನಿಯೋಜಿಸಿತ್ತು.
ಏರ್ಇಂಡಿಯಾ ದುರಂತದ ತನಿಖೆಗಾಗಿ ತಾನು ನಿಯೋಜಿಸುವ ತನಿಖಾಧಿಕಾರಿಗೆ ವೀಕ್ಷಕನ ಸ್ಥಾನಮಾನ ನೀಡಬೇಕೆಂದು ಐಸಿಎಓ ಕೇಂದ್ರ ಸರಕಾರಕ್ಕೆ ತಿಳಿಸಿತ್ತು. ಆದರೆ ಭಾರತೀಯ ಅಧಿಕಾರಿಗಳು ಈ ಕೊಡುಗೆಯನ್ನು ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಹ್ಮದಾಬಾದ್ ನ ಏರ್ಇಂಡಿಯಾ ಅವಘಡದ ತನಿಖೆಯ ನೇತೃತ್ವ ವಹಿಸಿರುವ ಭಾರತದ ವಿಮಾನ ಅವಘಡ ತನಿಖಾ ಸಂಸ್ಥೆಯು ಪಾಲ್ಗೊಂಡಿರುವಾಗ ಬ್ಲ್ಯಾಕ್ಬಾಕ್ಸ್ ರೆಕಾರ್ಡರ್ ಗಳನ್ನು ಭಾರತದಲ್ಲಿ ಪರಿಶೀಲಿಸಲಾಗುವುದೇ ಅಥವಾ ಅಮೆರಿಕದಲ್ಲೇ ಎಂಬ ಪ್ರಶ್ನೆಗಳು ಕೂಡಾ ಮೂಡಿವೆ. ಏರ್ಇಂಡಿಯಾ ದುರಂತಕ್ಕೆ ಸಂಬಂಧಿಸಿ ಭಾರತ ಸರಕಾರ ಈವರೆಗೆ ಕೇವಲ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಪತ್ರಕರ್ತರ ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸಿರಲಿಲ್ಲ.
ಅಂತಾರಾಷ್ಟ್ರೀಯ ವೈಮಾನಿಕ ನಿಯಮಾವಳಿ ಆನೆಕ್ಸ್ 13ರ ಪ್ರಕಾರ, ಫ್ಲೈಟ್ ರೆಕಾರ್ಡರ್ಗಳನ್ನು ದತ್ತಾಂಶಗಳನ್ನು ದುರಂತದ ನಡೆದ ತಕ್ಷಣದಿಂದಲೇ ವಿಶ್ಲೇಷಿಸಬೇಕಾಗುತ್ತದೆ. ಭವಿಷ್ಯತ್ತಿನಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸುವುದೇ ಇದರ ಹಿಂದಿರುವ ಉದ್ದೇಶವಾಗಿದೆ.
ಸಾಮಾನ್ಯವಾಗಿ ವಿಮಾನ ಅವಘಡದ ಕುರಿತ ತನಿಖೆ ಪ್ರಾಥಮಿಕ ತನಿಖೆಯ ವರದಿಯು ಘಟನೆ ನಡೆದ 30 ದಿನಗಳ ಆನಂತರ ಲಭ್ಯವಾಗುತ್ತದೆ.







