ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ಹೇಳಿದ್ದೇನು?

Photo credit: X/@AmitShah
ಹೊಸದಿಲ್ಲಿ: "ವಿಮಾನ ಟೇಕಾಫ್ ಆದ ಸುಮಾರು 30 ಸೆಕೆಂಡ್ಗಳಲ್ಲಿ ಭೀಕರ ಸದ್ದು ಕೇಳಿಸಿತು. ನೋಡನೋಡುತ್ತಿದ್ದಂತೆಯೇ ವಿಮಾನ ಪತನಗೊಂಡಿತು; ಕಣ್ಣು ತೆರೆಯುವುದರೊಳಗೆ ಇವೆಲ್ಲವೂ ಸಂಭವಿಸಿತು" ಎಂದು ಅಹ್ಮದಾಬಾದ್ ವಿಮಾನ ದುರಂತದಲ್ಲಿ ಬದುಕಿ ಉಳಿದ ಏಕೈಕ ಪ್ರಯಾಣಿಕ ಹೇಳಿದ್ದಾರೆ.
ಭಾರತ ಮೂಲದ ಬ್ರಿಟನ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಿಂದೂಸ್ತಾನ್ ಟೈಮ್ಸ್ ಪ್ರತಿನಿಧಿ ಜತೆಗೆ ಈ ಭಯಾನಕ ಅನುಭವ ಹಂಚಿಕೊಂಡಿದ್ದಾರೆ.
ಈಗಾಗಲೇ ವರದಿಯಾಗಿರುವಂತೆ 11A ಆಸನದಲ್ಲಿ ರಮೇಶ್ ಪ್ರಯಾಣಿಸುತ್ತಿದ್ದರು. ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ಬೇರೆ ಸಾಲಿನ ಆಸನದಲ್ಲಿ ಪ್ರಯಾಣಿಸುತ್ತಿದ್ದ ಸಹೋದರ ಅಜಯ್ ಕುಮಾರ್ ರಾಕೇಶ್ (45) ಅವರೊಂದಿಗೆ ಲಂಡನ್ಗೆ ವಾಪಸ್ಸಾಗುವ ವೇಳೆ ದುರಂತ ಸಂಭವಿಸಿದೆ.
ರಮೇಶ್ ಅವರ ಎದೆಗೆ ಗಾಯಗಳಾಗಿವೆ. ತಮ್ಮ ಸಹೋದರನನ್ನು ಹುಡುಕಿ ಕೊಡುವಂತೆ ರಮೇಶ್ ಮೊರೆ ಇಟ್ಟರು. ಅದರೆ ಹೊತ್ತಿ ಉರಿಯುತ್ತಿರುವ ವಿಮಾನದಿಂದ ಪವಾಡಸದೃಶವಾಗಿ ಬದುಕಿ ಉಳಿದದ್ದು ಹೇಗೆ ಎಂಬ ಬಗ್ಗೆ ಕಲ್ಪನೆ ಇಲ್ಲ ಎಂದು ರಮೇಶ್ ಹೇಳಿದ್ದಾಗಿ ಸಂಬಂಧಿಕರು ವಿವರಿಸಿದ್ದಾರೆ.
"ಈ ಸುದ್ದಿ ಕೇಳಿ ನಮಗೆ ಆಘಾತವಾಯಿತು" ಎಂದು ಲೀಸ್ಟೆರ್ನಲ್ಲಿರುವ ಅವರ ಸಹೋದರ ನಯನ್ ಕುಮಾರ್ (27) ಪ್ರತಿಕ್ರಿಯಿಸಿದ್ದಾರೆ. "ನಾನು ಹೇಗೆ ವಿಮಾನದಿಂದ ಹೊರಬಂದೆ ಎನ್ನುವುದೇ ಗೊತ್ತಿಲ್ಲ" ಎಂದು ರಮೇಶ್ ಹೇಳಿದ್ದಾಗಿ ಅವರು ತಿಳಿಸಿದರು.







