ಬರ್ಮಿಂಗ್ಹ್ಯಾಮ್ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ತೊಂದರೆ; ಸುರಕ್ಷಿತವಾಗಿ ಲ್ಯಾಂಡ್ ಆದ ಡ್ರೀಮ್ಲೈನರ್

File Photo: PTI
ಹೊಸದಿಲ್ಲಿ: ಅಮೃತಸರದಿಂದ ಬರ್ಮಿಂಗ್ಹ್ಯಾಮ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಡ್ರೀಮ್ಲೈನರ್ (AI117) ವಿಮಾನವು ಶನಿವಾರ ಇಳಿಯುವ ಮುನ್ನ ತಾಂತ್ರಿಕ ತೊಂದರೆ ಅನುಭವಿಸಿತು. ಆದರೆ ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಬರ್ಮಿಂಗ್ಹ್ಯಾಮ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಅಂತಿಮ ಹಂತದಲ್ಲಿ ರ್ಯಾಮ್ ಏರ್ ಟರ್ಬೈನ್ (RAT) ಸ್ವಯಂ ನಿಯೋಜನೆಯಾದರೂ, ವಿಮಾನದ ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿದ್ದವು ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೃತಸರದಿಂದ ಮಧ್ಯಾಹ್ನ 12.52 ಕ್ಕೆ ಹೊರಟ ವಿಮಾನವು ಸಂಜೆ 7.07 ಕ್ಕೆ (ಸ್ಥಳೀಯ ಸಮಯ) ಬರ್ಮಿಂಗ್ಹ್ಯಾಮ್ಗೆ ಸುರಕ್ಷಿತವಾಗಿ ತಲುಪಿತು. ಘಟನೆಯ ನಂತರ ವಿಮಾನವನ್ನು ತಾಂತ್ರಿಕ ತಪಾಸಣೆಗಾಗಿ ನಿಲ್ಲಿಸಲಾಗಿದ್ದು, ಬರ್ಮಿಂಗ್ಹ್ಯಾಮ್ನಿಂದ ದಿಲ್ಲಿಗೆ ಹೊರಡಬೇಕಿದ್ದ AI114 ಹಾರಾಟವನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.
“AI117 ಹಾರಾಟದ ವೇಳೆ RAT ನಿಯೋಜನೆ ಪತ್ತೆಯಾದರೂ, ಎಲ್ಲಾ ವಿದ್ಯುತ್ ಮತ್ತು ಹೈಡ್ರಾಲಿಕ್ ಕಂಟ್ರೋಲ್ ಗಳು ಸಾಮಾನ್ಯವಾಗಿದ್ದವು. ಯಾವುದೇ ತುರ್ತು ಪರಿಸ್ಥಿತಿ ಉಂಟಾಗದೆ ವಿಮಾನವು ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ,” ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ವಿಮಾನ ತಜ್ಞರ ಪ್ರಕಾರ, ರ್ಯಾಮ್ ಏರ್ ಟರ್ಬೈನ್(RAT) ಸಾಮಾನ್ಯವಾಗಿ ಡ್ಯುಯಲ್ ಎಂಜಿನ್ ವೈಫಲ್ಯ, ಸಂಪೂರ್ಣ ವಿದ್ಯುತ್ ಅಥವಾ ಹೈಡ್ರಾಲಿಕ್ ವೈಫಲ್ಯ ಉಂಟಾದಾಗ ಸ್ವಯಂ ನಿಯೋಜನೆಗೊಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ವೈಫಲ್ಯ ಕಂಡುಬಂದಿಲ್ಲ. ಇದು ತಾಂತ್ರಿಕ ಅಸಮರ್ಪಕತೆಯ ಪರಿಣಾಮವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
“ಇದು ಪ್ರಾಥಮಿಕ ತಾಂತ್ರಿಕ ವ್ಯತ್ಯಯವಾಗಿದ್ದು, ಅಕ್ಟೋಬರ್ 4ರ ಘಟನೆ ಜೂನ್ 12ರಂದು ಅಹಮದಾಬಾದ್ನಲ್ಲಿ ನಡೆದ AI171 RAT ನಿಯೋಜನೆಯ ಘಟನೆಯಷ್ಟರ ಮಟ್ಟಿಗೆ ಗಂಭೀರವಲ್ಲ,” ಎಂದು ಹಿರಿಯ ಪೈಲಟ್ಗಳು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತಾಂತ್ರಿಕ ತಂಡ ಸಮಗ್ರ ತನಿಖೆ ಆರಂಭಿಸಿದ್ದು, ಅಗತ್ಯವಾದ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಕಂಪೆನಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.







