ಏರ್ ಬಸ್ ವಿಮಾನದ ಇಂಜಿನ್ ರಿಪೇರಿ ಮಾಡದೆ, ದಾಖಲೆಗಳಲ್ಲಿ ತಿರುಚುವಿಕೆ | ಏರ್ ಇಂಡಿಯಾಗೆ ಎಚ್ಚರಿಕೆ ನೀಡಿದ DGCA: ವರದಿ

PC ; NDTV
ಹೊಸದಿಲ್ಲಿ: ಕಳೆದ ಮಾರ್ಚ್ ತಿಂಗಳಲ್ಲಿ ಯೂರೋಪ್ ಒಕ್ಕೂಟದ ವಿಮಾನ ಯಾನ ಸುರಕ್ಷತಾ ಸಂಸ್ಥೆಯ ನಿರ್ದೇಶನದಂತೆ ಏರ್ ಬಸ್ ಎ320 ವಿಮಾನದ ಇಂಜಿನ್ ಬಿಡಿಭಾಗಗಳನ್ನು ಸಕಾಲಿಕ ಸಮಯಕ್ಕೆ ರಿಪೇರಿ ಮಾಡಲಾಗಿಲ್ಲ ಹಾಗೂ ಈ ನಿರ್ದೇಶನವನ್ನು ಪಾಲನೆ ಮಾಡಲಾಗಿದೆ ಎಂದು ಬಿಂಬಿಸಲು ದಾಖಲೆಗಳನ್ನು ತಿರುಚಲಾಗಿದೆ ಎಂದು ಭಾರತದ ವಾಯು ಯಾನ ನಿಗಾ ಸಂಸ್ಥೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಗ್ಗದ ದರ ಪ್ರಯಾಣದ ವಾಯು ಯಾನ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ಛೀಮಾರಿ ಹಾಕಿದೆ ಎಂಬ ಸಂಗತಿ ಸರಕಾರಿ ಮೆಮೊದಿಂದ ಬಹಿರಂಗವಾಗಿದೆ.
ಈ ಕುರಿತು Reuters ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ, ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದ ಬಳಿ ನಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ನಿವಾರಣಾ ಹಾಗೂ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಜೂನ್ 12ರಂದು ಅಹಮದಾಬಾದ್ ನಲ್ಲಿ ಬೋಯಿಂಗ್ ಡ್ರೀಮ್ ಲೈನರ್ ವಿಮಾನ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ, ಓರ್ವ ಪ್ರಯಾಣಿಕ ಮಾತ್ರ ಬದುಕುಳಿದ ದುರ್ಘಟನೆ ನಡೆದಾಗಿನಿಂದ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕಾರ್ಯನಿರ್ವಹಣೆಯು ತೀವ್ರ ಪರಿಶೀಲನೆಗೊಳಗಾಗುತ್ತಿದೆ. ಕಳೆದ ಒಂದು ದಶಕದಲ್ಲಿ ನಡೆದಿರುವ ವಿಶ್ವದ ಈ ಅತ್ಯಂತ ಭೀಕರ ವಿಮಾನ ದುರಂತದ ಕುರಿತು ತನಿಖೆ ಪ್ರಗತಿಯಲ್ಲಿದೆ.
ಜೂನ್ 12ರಂದು ಅಹಮದಾಬಾದ್ ನಲ್ಲಿ ವಿಮಾನ ಅಪಘಾತ ಸಂಭವಿಸುವುದಕ್ಕೂ ಕೆಲವು ತಿಂಗಳ ಮುನ್ನ, ಮಾರ್ಚ್ 18ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಏರ್ ಬಸ್ ವಿಮಾನದಲ್ಲಿನ ಇಂಜಿನ್ ಸಮಸ್ಯೆ ಬೆಳಕಿಗೆ ಬಂದಿತ್ತು. ಆದರೆ, ತಪಾಸಣೆ ಬಾಕಿ ಇದ್ದರೂ, ಅದನ್ನು ಮರೆಮಾಚಿ ಮೂರು ಏರ್ ಬಸ್ ವಿಮಾನಗಳ ಹಾರಾಟ ನಡೆಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಈ ವರ್ಷ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಯಾನ ಸಂಸ್ಥೆಯ ಮಾತೃ ಸಂಸ್ಥೆಯಾದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಎಚ್ಚರಿಕೆ ನೀಡಿತ್ತಲ್ಲದೆ, ಕಳೆದ ಜೂನ್ ತಿಂಗಳಲ್ಲಿ ಪೈಲಟ್ ಗಳ ವೇಳಾಪಟ್ಟಿಯಲ್ಲಿ ಗಂಭೀರ ಉಲ್ಲಂಘನೆಯಾಗಿದೆ ಎಂದೂ ಎಚ್ಚರಿಸಿತ್ತು.







