ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಸ್

PC : @AJEnglish
ಹೊಸದಿಲ್ಲಿ : ಇಂಡೋನೇಶ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿಯೇ ಜ್ವಾಲಾಮುಖಿ ಸ್ಫೋಟಗೊಂಡಿದ್ದರಿಂದ ಬುಧವಾರ ದಿಲ್ಲಿ-ಬಾಲಿ ಏರ್ ಇಂಡಿಯಾ ವಿಮಾನವು ಮಾರ್ಗ ಮಧ್ಯದಿಂದಲೇ ದಿಲ್ಲಿಗೆ ವಾಪಸಾಗಿದೆ.
ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಸುರಕ್ಷಿತವಾಗಿ ಮರಳಿದೆ.
ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡಿರುವ ವರದಿಗಳಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ದಿಲ್ಲಿಯಿಂದ ಬಾಲಿಗೆ ತೆರಳುತ್ತಿದ್ದ ವಿಮಾನಕ್ಕೆ ದಿಲ್ಲಿಗೆ ಮರಳುವಂತೆ ಸೂಚಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡೋನೇಶ್ಯಾದ ಪೂರ್ವ ಭಾಗದಲ್ಲಿರುವ ಮೌಂಟ್ ಲೆವೊಟೋಬಿ ಲಾಕಿ-ಲಾಕಿ ಜ್ವಾಲಾಮುಖಿಯ ಸ್ಫೋಟವು ಯಾನಕ್ಕೆ ವ್ಯತ್ಯಯವನ್ನುಂಟು ಮಾಡಿತ್ತು. ಈ ಘಟನೆಯು ಪ್ರದೇಶದಾದ್ಯಂತ ವಿಮಾನ ಯಾನಗಳ ಮೇಲೆ ಪರಿಣಾಮ ಬೀರಿದ್ದು,ಡಝನ್ಗಟ್ಟಲೆ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನ ಯಾನಗಳಿಗೆ ಅಡ್ಡಿಯನ್ನುಂಟು ಮಾಡಿದೆ ಎಂದು ಬಾಲಿಯ ಎನ್ಗುರಾ ರಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.





