ತಾಂತ್ರಿಕ ದೋಷ : ಥೈಲ್ಯಾಂಡ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ ಹೈದರಾಬಾದ್‌ಗೆ ವಾಪಾಸು

ಹೈದರಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ, ಹೈದರಾಬಾದ್ ನಿಂದ ಥೈಲ್ಯಾಂಡ್ ಫುಕೆಟ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ತನ್ನ ಮೂಲ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ನಡೆದಿದೆ ಎಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
98 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಬೆಳಗ್ಗೆ 6.57ರ ವೇಳೆಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಕ್ತಾರರು, “ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವೊಂದು ಹೈದರಾಬಾದ್ ಗೆ ಮರಳಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನದ ಸಿಬ್ಬಂದಿಗಳು ವಿಮಾನ ನಿಲ್ದಾಣಕ್ಕೆ ವಾಪಸು ಮರಳುವ ನಿರ್ಧಾರ ಕೈಗೊಂಡಿದ್ದಾರೆ” ಎಂದು ಹೇಳಲಾಗಿದೆ.
ವಿಮಾನ ಪ್ರಯಾಣದಲ್ಲಿನ ವ್ಯತ್ಯಯದಿಂದ ತೊಂದರೆಗೀಡಾದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ತಕ್ಷಣವೇ ಪರ್ಯಾಣ ವಿಮಾನದ ವ್ಯವಸ್ಥೆ ಮಾಡಲಾಯಿತು. ಈ ವಿಳಂಬದ ಅವಧಿಯಲ್ಲಿ ಅತಿಥಿಗಳಿಗೆ ವಿಶ್ರಾಂತಿ ವ್ಯವಸ್ಥೆಯನ್ನು ಒದಗಿಸಲಾಯಿತು ಎಂದೂ ಈ ಪ್ರಕಟನೆಯಲ್ಲಿ ತಿಳಿಸಲಾಗಿದೆ.







