ಏರ್ ಇಂಡಿಯಾ ವಿಮಾನ ದುರಂತ ಬಿ.ಜೆ. ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಸಹಿತ 9 ಮಂದಿ ಮೃತ್ಯು

PC : PTI
ಅಹ್ಮದಾಬಾದ್: ಏರ್ ಇಂಡಿಯಾದ ವಿಮಾನ ಎಐ 171 ಬಿಜೆ ವೈದ್ಯಕೀಯ ಕಾಲೇಜಿನ ಭೋಜನಾಲಯದ ಕಟ್ಟಡಕ್ಕೆ ಗುರುವಾರ ಅಪರಾಹ್ನ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಐವರು ವೈದ್ಯರು ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ.
ವಿಮಾನ ಕಟ್ಟಡಕ್ಕೆ ಢಿಕ್ಕಿ ಹೊಡೆದ ಸಂದರ್ಭ ಒಳಗೆ ವೈದ್ಯರು, ಅಡುಗೆಯವರು ಹಾಗೂ ಭೋಜನಾಲಯದ ಸಿಬ್ಬಂದಿ ಸೇರಿದಂತೆ 60ಕ್ಕೂ ಅಧಿಕ ಜನರಿದ್ದರು. ಇದರಿಂದ ಮಧ್ಯಾಹ್ನದ ಭೋಜನದ ಸಮಯ ದುಃಸ್ವಪ್ನವಾಗಿ ಪರಿವರ್ತಿತವಾಯಿತು. ಹಲವು ಕಿರಿಯ ವೈದ್ಯರು ಆಗಷ್ಟೇ ಭೋಜನಾಲಯಕ್ಕೆ ಆಗಮಿಸಿದ್ದರು.
32ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೆಲವರು ಗಂಬೀರ ಗಾಯಗೊಂಡಿದ್ದಾರೆ. ಅವರನ್ನು ಸಿವಿಲ್, ಝೈಡಸ್, ಕೆ.ಡಿ. ಹಾಗೂ ಅಪೊಲ್ಲೊ ಸೇರಿದಂತೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ನಾಗರಿಕ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರದೀಪ್ ಸೋಲಂಕಿ ಅವರ ಗರ್ಭಿಣಿ ಪತ್ನಿ ಸೇರಿದ್ದಾರೆ. ವಿಮಾನ ಢಿಕ್ಕಿಯಾದ ಸಂದರ್ಭ ಸೋಲಂಕಿ ಅವರು ತನ್ನ ವಸತಿ ಗೃಹದ ಕೊಠಡಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.
ಇನ್ನೊಂದು ಹೃದಯ ವಿದ್ರಾವಕ ಘಟನೆಯೆಂದರೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿದ್ಯಾರ್ಥಿ ಡಾ. ನೀಲಕಾಂತ್ ಅವರೊಂದಿಗೆ ಅವರನ್ನು ಭೇಟಿಯಾಗಲು ಬಂದ ಅವರ ತಾಯಿ, ಮಾವ ಹಾಗೂ ಚಿಕ್ಕಮ್ಮ ಸಾವನ್ನಪ್ಪಿರುವುದು.







