ಏರ್ ಇಂಡಿಯಾ ವಿಮಾನ ದುರಂತ | ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತ್ಯು
ದೃಢಪಡಿಸಿದ ಬಿ.ಜೆ. ವೈದ್ಯಕೀಯ ಕಾಲೇಜು

PC : PTI
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜಿನ ಭೋಜನಾಲಯದಲ್ಲಿ ಊಟ ಮಾಡುತ್ತಿದ್ದ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಕಿರಿಯ ವೈದ್ಯರ ಸಂಘಟನೆ (ಜೆಡಿಎ) ರವಿವಾರ ದೃಢಪಡಿಸಿದೆ.
ಮೃತಪಟ್ಟ ವಿದ್ಯಾರ್ಥಿಗಳನ್ನು ಜಯಪ್ರಕಾಶ್ ಚೌಧರಿ (ಎಂಬಿಬಿಎಸ್ 2023), ಮಾನವ್ ಭದು (ಎಂಬಿಬಿಎಸ್ 2024), ಆರ್ಯನ್ ರಜಪೂತ್ (ಎಂಬಿಬಿಎಸ್ 2024) ಹಾಗೂ ರಾಕೇಶ್ ದಿಹೋರಾ (ಎಂಬಿಬಿಎಸ್ 2023) ಎಂದು ಗುರುತಿಸಲಾಗಿದೆ ಎಂದು ಅದು ಹೇಳಿದೆ.
ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 20 ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ 11 ಮಂದಿ ಬಿಡುಗಡೆಯಾಗಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ಜೆಡಿಎ ದೃಢಪಡಿಸಿದೆ.
ಇದಲ್ಲದೆ, ಪಕ್ಕದ ‘ಅತುಲ್ಯಂ’ ಹಾಸ್ಟೆಲ್ ಕಟ್ಟಡಲ್ಲಿ ತಂಗಿದ್ದ ಸೂಪರ್ ಸ್ಪೆಷಾಲಿಟಿ ನಿವಾಸಿ ವೈದ್ಯರ ಕುಟುಂಬದ ನಾಲ್ವರು ಸದಸ್ಯರು ಕೂಡ ಮೃತಪಟ್ಟಿದ್ದಾರೆ. ರೆಸಿಡೆಂಟ್ ವೈದ್ಯರ ಪತ್ನಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಎಂದು ಅದು ತಿಳಿಸಿದೆ.
ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಾವಿನ ಸಂಖ್ಯೆ ಕುರಿತು ತಪ್ಪು ಮಾಹಿತಿ ಹರಡದಂತೆ ಸಂಘಟನೆ ಸಾರ್ವಜನಿಕರನ್ನು ಆಗ್ರಹಿಸಿದೆ.
‘‘ಈ ಸವಾಲಿನ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರೆಸಿಡೆಂಟ್ ವೈದ್ಯರ ಸಾವಿನ ಸಂಖ್ಯೆ ಹೆಚ್ಚಿರುವುದಾಗಿ ವದಂತಿ ಹರಡುತ್ತಿದ್ದಾರೆ. ಇಂತಹ ತಪ್ಪು ಮಾಹಿತಿ ಮೂಲಕ ದಾರಿ ತಪ್ಪಿಸಬೇಡಿ ಹಾಗೂ ವದಂತಿಗಳನ್ನು ಹರಡಬೇಡಿ’’ ಎಂದು ನಾವು ಪ್ರತಿಯೊಬ್ಬರಲ್ಲಿ ವಿನಂತಿಸುತ್ತೇವೆ ಎಂದು ಜೆಡಿಎ ಹೇಳಿದೆ.
ಈ ನಡುವೆ ಗುಜರಾತ್ನ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ದುರಂತದಲ್ಲಿ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವು ನೀಡುವಂತೆ ಮನವಿ ಮಾಡಿ ಟಾಟಾ ಸಮೂಹಕ್ಕೆ ಪತ್ರ ಬರೆದಿದೆ.







