ಏರ್ ಇಂಡಿಯಾ ವಿಮಾನ ದುರಂತ | ಮೃತಪಟ್ಟ ಇತರ 18 ಮಂದಿ ಯಾರು?

PC : PTI
ಅಹ್ಮದಾಬಾದ್: ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿ ದಿನಗಳು ಕಳೆದರೂ ಮೃತರ ಸಂಖ್ಯೆ ಹಾಗೂ ಅವರ ಗುರುತಿನ ಬಗ್ಗೆ ಇದುವರೆಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಅಹ್ಮದಬಾದ್ ನಲ್ಲಿರುವ ಬಿ.ಜೆ. ವೈದ್ಯಕೀಯ ಕಾಲೇಜು ಹಾಗೂ ನಾಗರಿಕ ಆಸ್ಪತ್ರೆಯ ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ಕಟ್ಟಡಕ್ಕೆ ಢಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನದಲ್ಲಿ 242 ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಸಿವಿಲ್ ಆಸ್ಪತ್ರೆ 270 ಮೃತದೇಹಗಳನ್ನು ಸ್ವೀಕರಿಸಿದೆ ಎಂದು ಕಾಲೇಜಿನ ಕಿರಿಯ ವೈದ್ಯರ ಸಂಘಟನೆಯ ಅಧ್ಯಕ್ಷ ಡಾ. ಧವಳ್ ಗಮೇಟಿ ಶನಿವಾರ ಹೇಳಿದ್ದರು. ಆದರೆ, ಇದುವರೆಗೆ 272 ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಸಂಖ್ಯೆಯಲ್ಲಿ 9 ಸ್ಥಳೀಯ ನಿವಾಸಿಗಳು ಹಾಗೂ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 13 ಮಂದಿ ಒಳಗೊಂಡಿದ್ದಾರೆ. ಹಾಗಾದರೆ ಮೃತಪಟ್ಟ ಇತರ 18 ಮಂದಿ (272- (241+13)) ಯಾರು? ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಡಿಎನ್ಎ ಗುರುತಿಸುವ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಸಾವನ್ನಪ್ಪಿದವರ ನಿಖರ ಸಂಖ್ಯೆ ಹಾಗೂ ಗುರುತನ್ನು ಸ್ಪಷ್ಟಪಡಿಸಲು ಸಾಧ್ಯ ಎಂದು ಸರಕಾರ ಹೇಳಿದೆ.
ಇದುವರೆಗೆ ಡಿಎನ್ಎ ಪರೀಕ್ಷೆ ಮೂಲಕ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 99 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಈ ಮೃತದೇಹಗಳನ್ನು ಅವರವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.





