ಏರ್ ಇಂಡಿಯಾ ವಿಮಾನ ದುರಂತ | ಡಿಎನ್ಎ ಪರೀಕ್ಷೆಯಿಂದ 99 ಮೃತರ ಗುರುತು ಪತ್ತೆ

PC : PTI
ಅಹ್ಮದಾಬಾದ್: ಅಹ್ಮದಾಬಾದ್ನಲ್ಲಿ ಭೀಕರ ವಿಮಾನ ದುರಂತ ನಡೆದ ನಾಲ್ಕು ದಿನಗಳ ಬಳಿಕ, 99 ಸಂತ್ರಸ್ತರನ್ನು ಡಿಎನ್ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ ಮತ್ತು ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿಯ ಮೃತದೇಹ ಸೇರಿದಂತೆ 64 ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಏರ್ ಇಂಡಿಯಾದ ಎಐ-171 ವಿಮಾನವು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹಾರಾಟ ಆರಂಭಿಸಿದ ಬಳಿಕ ಕೇವಲ ಒಂದು ನಿಮಿಷದಲ್ಲಿ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿಗಳ ಹಾಸ್ಟೆಲ್ಗೆ ಅಪ್ಪಳಿಸಿದ್ದು, ಒಟ್ಟು 270 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟರೆ, ಓರ್ವ ಪ್ರಯಾಣಿಕ ಅತ್ಯಂತ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಆ ಪ್ರದೇಶದಲ್ಲಿದ್ದ 29 ಮಂದಿ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ವಿಜಯ ರೂಪಾನಿಯ ಮೃತದೇಹವನ್ನು ನಗರದ ಸರಕಾರಿ ಆಸ್ಪತ್ರೆಯಲ್ಲಿ ಅವರ ಪತ್ನಿ ಅಂಜಲಿ ರೂಪಾನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ದುರಂತದಲ್ಲಿ ಮಡಿದ ಹೆಚ್ಚಿನ ಸಂತ್ರಸ್ತರ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿರುವುದರಿಂದ ಡಿಎನ್ಎ ಪರೀಕ್ಷೆ ಅಗತ್ಯವಾಗಿದೆ.
‘‘ಈವರೆಗೆ 99 ಡಿಎನ್ಎ ಮಾದರಿಗಳು ತಾಳೆಯಾಗಿವೆ. 64 ದೇಹಗಳನ್ನು ಈಗಾಗಲೇ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಮೃತರು ಗುಜರಾತ್ ಮತ್ತು ರಾಜಸ್ಥಾನದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ’’ ಎಂದು ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಡ್ ಡಾ. ರಾಕೇಶ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.







