ಏರ್ ಇಂಡಿಯಾ ವಿಮಾನ ದುರಂತ | 204 ಮೃತದೇಹಗಳ ಹಸ್ತಾಂತರ

PC : PTI
ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ 223 ಮಂದಿಯ ಮೃತದೇಹದ ಡಿಎನ್ಎ ಮಾದರಿಗಳು ಹೋಲಿಕೆಯಾಗಿವೆ. 204 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.
ಉಳಿದ ಮೃತದೇಹಗಳನ್ನು ಗುರುತಿಸುವ ಹಾಗೂ ಹಸ್ತಾಂತರಿಸುವ ಪ್ರಯತ್ನವನ್ನು ಸಿವಿಲ್ ಆಸ್ಪತ್ರೆಯ ಆಡಳಿತ ತೀವ್ರಗೊಳಿಸಿದೆ. ಈ ನಡುವೆ ಗಂಭೀರ ಗಾಯಗೊಂಡು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಂತ್ರಸ್ತರು ಸಾವನ್ನಪ್ಪಿದ್ದಾರೆ.
ಅವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಸಿವಿಲ್ ಆಸ್ಪತ್ರೆಯಿಂದ ಹಸ್ತಾಂತರಿಸಲಾದ ಮೃತದೇಹಗಳ ಒಟ್ಟು ಸಂಖ್ಯೆ 204ಕ್ಕೆ ತಲುಪಿದೆ.
ಹೋಲಿಕೆಯಾದ 223 ಮೃತದೇಹಗಳ ಪೈಕಿ 168 ಭಾರತೀಯರ, 7 ಪೋರ್ಚುಗೀಸರ, 36 ಬ್ರಿಟೀಷರ, 1 ಕೆನಡಾ ಪ್ರಜೆಯ ಹಾಗೂ ವಿಮಾನ ದುರಂತಕ್ಕೀಡಾದ ವಲಯದಲ್ಲಿದ್ದ ಪ್ರಯಾಣಿಕರಲ್ಲದ 11 ಸ್ಥಳೀಯ ನಿವಾಸಿಗಳ ಮೃತದೇಹ ಸೇರಿದೆ ಎಂದು ಡಾ. ಜೋಷಿ ತಿಳಿಸಿದ್ದಾರೆ.
15 ಮೃತದೇಹಗಳನ್ನು ಏರ್ ಲಿಫ್ಟ್ ಮಾಡಲಾಗಿದೆ ಹಾಗೂ 189 ಮೃತದೇಹಗಳನ್ನು ರಸ್ತೆ ಮೂಲಕ ಕಳುಹಿಸಿಕೊಡಲಾಗಿದೆ. ಮೃತದೇಹಗಳನ್ನು ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಜೋಷಿ ತಿಳಿಸಿದ್ದಾರೆ.
ಅಹ್ಮದಾಬಾದ್ ಅತ್ಯಧಿಕ 58 ಮೃತದೇಹಗಳನ್ನು ಸ್ವೀಕರಿಸಿದೆ. ಅನಂತರ ವಡೊದರಾ 21, ಸೂರತ್ 11, ಉದಯಪುರ 7, ಮುಂಬೈ 9, ದಿಯು 14 ಹಾಗೂ ಖೇಡಾ 11 ಮೃತದೇಹಗಳನ್ನು ಸ್ವೀಕರಿಸಿದೆ. ಇದಲ್ಲದೆ ಮೆಹ್ಸಾನಕ್ಕೆ 6, ಗಾಂಧಿನಗರಕ್ಕೆ 6, ರಾಜ್ಕೋಟ್ಗೆ 3, ಜಾಮ್ನಗರಕ್ಕೆ 2, ಪಾಟ್ನಾಕ್ಕೆ 2, ದ್ವಾರಕಾಕ್ಕೆ 2, ಅರಾವಳಿಗೆ 2 ಹಾಗೂ ಲಂಡನ್ಗೆ 2 ಮೃತದೇಹಗಳನ್ನು ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೊಟಾಡ್, ಜೋಧಪುರ, ಆನಂದ್, ಪಾಲನ್ಪುರ, ಮಹಾರಾಷ್ಟ್ರ, ಜುಂಗಾಧ್, ಅಮ್ರೇಲಿ, ಗಿರಿ ಸೋಮನಾಥ್, ಮಹೀಸಾಗರ್, ಭಾವನಗರ್, ಪಾಟ್ನಾ, ನಾಡಿಯಾಡ್, ಸಬರಕಾಂತ, ನಾಗಾಲ್ಯಾಂಡ್ ಹಾಗೂ ಮೊಡಾಸಾಕ್ಕೆ ತಲಾ ಒಂದು ಮೃತದೇಹಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಡಾ. ಜೋಷಿ ತಿಳಿಸಿದ್ದಾರೆ.







