ಅಹಮದಾಬಾದ್ ವಿಮಾನ ಅಪಘಾತದ ನಂತರ ಕಠಿಣ ತಪಾಸಣೆ: ಒಂದೇ ದಿನದಲ್ಲಿ 7 ಏರ್ ಇಂಡಿಯಾ ವಿಮಾನಗಳ ರದ್ದು

PC : PTI
ಹೊಸ ದಿಲ್ಲಿ: ಮಂಗಳವಾರ ತಾಂತ್ರಿಕ ತೊಂದರೆ ಹಾಗೂ ವಿಮಾನದ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಟ್ಟು ಏಳು ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಗಳು ರದ್ದುಗೊಂಡಿವೆ. ರದ್ದಾಗಿರುವ ವಿಮಾನಗಳ ಪೈಕಿ ಆರು ವಿಮಾನಗಳು ಕಳೆದ ಗುರುವಾರ ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್ಲೈನರ್ ಸರಣಿಯ ವಿಮಾನಗಳಾಗಿವೆ.
ಮಂಗಳವಾರ ಅಹಮದಾಬಾದ್ ನಿಂದ ಲಂಡನ್ಗೆ ಹಾಗೂ ದಿಲ್ಲಿಯಿಂದ ಪ್ಯಾರಿಸ್ಗೆ ತೆರಳಬೇಕಿದ್ದ ವಿಮಾನಗಳನ್ನು ತಾಂತ್ರಿಕ ತೊಂದರೆ ಕಂಡುಬಂದ ನಂತರ ರದ್ದುಗೊಳಿಸಲಾಯಿತು. ಲಂಡನ್-ಅಮೃತಸರ ಹಾಗೂ ಬೆಂಗಳೂರು-ಲಂಡನ್ ಮಾರ್ಗದ ಎರಡು ವಿಮಾನಗಳನ್ನೂ ರದ್ದುಗೊಳಿಸಲಾಯಿತು.
►ಮಂಗಳವಾರ ರದ್ದುಗೊಂಡ ವಿಮಾನಗಳು:
AI915 - ದಿಲ್ಲಿಯಿಂದ ದುಬೈ (B788 ಡ್ರೀಮ್ಲೈನರ್ ವಿಮಾನ)
AI153 - ದಿಲ್ಲಿಯಿಂದ ವಿಯೆನ್ನಾ (B788 ಡ್ರೀಮ್ಲೈನರ್ ವಿಮಾನ)
AI143 - ದಿಲ್ಲಿಯಿಂದ ಪ್ಯಾರಿಸ್ (B788 ಡ್ರೀಮ್ಲೈನರ್ ವಿಮಾನ)
AI159 - ಅಹಮದಾಬಾದ್ ನಿಂದ ಲಂಡನ್ (B788 ಡ್ರೀಮ್ಲೈನರ್ ವಿಮಾನ)
AI170 - ಲಂಡನ್ನಿಂದ ಅಮೃತಸರ (B788 ಡ್ರೀಮ್ಲೈನರ್ ವಿಮಾನ)
AI133 - ಬೆಂಗಳೂರಿನಿಂದ ಲಂಡನ್ (B788 ಡ್ರೀಮ್ಲೈನರ್ ವಿಮಾನ)
AI179 - ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೊ (B777 ಡ್ರೀಮ್ಲೈನರ್ ವಿಮಾನ)
ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ಸಂಸ್ಥೆ, ಹಾರಾಟಕ್ಕೂ ಮುನ್ನ ದಿಲ್ಲಿ-ಪ್ಯಾರಿಸ್ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿದ್ದರಿಂದ ರದ್ದುಗೊಳಿಸಲಾಯಿತು ಹಾಗೂ ವಿಮಾನದ ಅಲಭ್ಯತೆಯಿಂದಾಗಿ ಅಹಮದಾಬಾದ್-ಲಂಡನ್ ಮಾರ್ಗದ ವಿಮಾನ ಸೇವೆ ವ್ಯತ್ಯಯಗೊಂಡಿತು ಎಂದು ಹೇಳಿದೆ.
ಆದರೆ, ಇನ್ನಿತರ ವಿಮಾನಗಳ ರದ್ದತಿಗೆ ಕಾರಣವೇನು ಎಂದು ತಕ್ಷಣವೇ ತಿಳಿದು ಬರದಿದ್ದರೂ, ಆ ಮಾಹಿತಿಯನ್ನು ಏರ್ ಇಂಡಿಯಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಗುರುವಾರ (ಜೂನ್ 12) ವಿಮಾನ ಸಂಖ್ಯೆ 12 ಎಐ 171 ಅಪಘಾತಕ್ಕೀಡಾದ ನಂತರ, ಏರ್ ಇಂಡಿಯಾ ತನ್ನ ವಿಮಾನಗಳ ಸುರಕ್ಷತಾ ತಪಾಸಣೆಯನ್ನು, ವಿಶೇಷವಾಗಿ, ತನ್ನ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನಗಳ ತಪಾಸಣೆಯನ್ನು ಹೆಚ್ಚಳಗೊಳಿಸಿದೆ. ಈ ತಪಾಸಣೆಯಿಂದಾಗಿ ವಿಮಾನಗಳ ಸಂಚಾರ ದಟ್ಟನೆ ಸಾಧ್ಯತೆ ಇದೆ ಎನ್ನಲಾಗಿದ್ದು, ವಿಮಾನಗಳ ರದ್ದತಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.







