ಇಸ್ರೇಲ್ ಕ್ಷಿಪಣಿ ದಾಳಿ ವೇಳೆ ಇರಾನ್ ವಾಯುಪ್ರದೇಶ ಪ್ರವೇಶಿಸಿದ್ದ ಏರ್ ಇಂಡಿಯಾ ವಿಮಾನ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಂಡನ್ನಿಂದ ಹೊಸದಿಲ್ಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇರಾನ್ನ ಮಿಲಿಟರಿ ಮತ್ತು ಪರಮಾಣು ತಾಣಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸುತ್ತಿದ್ದ ವೇಳೆ ಇರಾನ್ ವಾಯುಪ್ರದೇಶವನ್ನು ಪ್ರವೇಶಿಸಿದ ಆತಂಕಕಾರಿ ಘಟನೆ ಬಯಲಾಗಿದೆ.
ಲಂಡನ್ ನಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಇರಾಕ್ ಮಾರ್ಗವಾಗಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ಆಗ ವಿಮಾನವು ಇರಾನ್ ವಾಯುಪ್ರದೇಶವನ್ನು ಪ್ರವೇಶಿಸಿತು. ಅದೇ ವೇಳೆ ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿತ್ತು. ಆದರೆ ಅದೃಷ್ಟವಶಾತ್ ಏರ್ ಇಂಡಿಯಾ ವಿಮಾನವು ಅಪಾಯದಿಂದ ಪಾರಾಯಿತು ಎಂದು ಎ ಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನಿನ ವಾಯುಪ್ರದೇಶದ ಹಠಾತ್ ಮುಚ್ಚುವಿಕೆಯಿಂದಾಗಿ ಶುಕ್ರವಾರ ಕನಿಷ್ಠ 16 ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನಗಳನ್ನು ಮಾರ್ಗ ಮಧ್ಯದಲ್ಲೇ ತಿರುಗಿಸಿತು. ಲಂಡನ್, ಟೊರೊಂಟೊ ಮತ್ತು ನ್ಯೂಯಾರ್ಕ್ನಂತಹ ನಗರಗಳ ನಡುವಿನ ಸೇವೆಗಳಿಗೆ ಇದರಿಂದ ತೊಂದರೆಯಾಗಿತ್ತು.
ಇಸ್ರೇಲ್ ದಾಳಿ ಪ್ರಾರಂಭಿಸಿದ ಬಳಿಕ ಇರಾನ್, ಇಸ್ರೇಲ್ ಸೇರಿದಂತೆ ಇರಾಕ್, ಜೋರ್ಡಾನ್ ಮತ್ತು ಸಿರಿಯಾಗಳು ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇದು ಮಧ್ಯಪ್ರಾಚ್ಯಕ್ಕೆ ಮತ್ತು ಅಲ್ಲಿಂದ ಬರುವ ಜಾಗತಿಕ ವಿಮಾನಗಳ ವ್ಯಾಪಕ ರದ್ದತಿ ಮತ್ತು ಬದಲಿ ಮಾರ್ಗ ಬಳಕೆಗೆ ಕಾರಣವಾಯಿತು. ಈ ಪ್ರದೇಶದ ಮೇಲೆ ವಾಯು ಸಂಚಾರ ರಾತ್ರೋರಾತ್ರಿ ಕಡಿಮೆಯಾದ ಕಾರಣ ಜಾಗತಿಕ ವಿಮಾನಯಾನ ಸಂಸ್ಥೆಗಳು ಟೆಲ್ ಅವೀವ್ ಮತ್ತು ಟೆಹ್ರಾನ್ಗೆ ವಿಮಾನಗಳನ್ನು ಸ್ಥಗಿತಗೊಳಿಸಿದವು.







