ಏರ್ ಇಂಡಿಯಾ ವಿಮಾನ ದುರಂತ | ವಿಮಾನದ ರೆಕ್ಕೆಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಂದ ಟ್ರಾಫಿಕ್ ಜಾಮ್
ಸಂಚಾರ ನಿರ್ವಹಣೆಗೆ ಪೊಲೀಸರ ಹರಸಾಹಸ

PC : X
ಅಹಮದಾಬಾದ್: ಜೂನ್ 12ರಂದು ವಿಮಾನದ ದುರಂತಕ್ಕೀಡಾಗಿದ್ದ ಏರ್ ಇಂಡಿಯಾದ ಎಐ-171 ವಿಮಾನದ ರೆಕ್ಕೆಯನ್ನು ತೆರವುಗೊಳಿಸಿ, ತನಿಖೆಗಾಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ಅಹಮದಾಬಾದ್ ನ ಶಾಹಿಬಾಗ್ ದಫ್ನಾಲ ಬಳಿಯ ಎಸಿಬಿ ಕಚೇರಿ ಸಮೀಪದಲ್ಲಿ ಮರವೊಂದಕ್ಕೆ ಸಿಲುಕಿಕೊಂಡ ಘಟನೆ ನಡೆದಿದೆ.
ಈ ವೇಳೆ ವಿಮಾನದ ಉದ್ದನೆಯ ರೆಕ್ಕೆ ಭಾಗವು ಮರವೊಂದಕ್ಕೆ ಸಿಲುಕಿಕೊಂಡಿದ್ದರಿಂದ, ಸುರಕ್ಷತೆಯನ್ನು ಖಾತರಿಪಡಿಸಲು ಹಾಗೂ ತುರ್ತು ಸೇವೆಗಳು ನೆರವಿಗಾಗಿ ಧಾವಿಸಲು ಪೊಲೀಸರು ಶಾಹಿಬಾಗ್ ದಫ್ನಲದಿಂದ ಹನುಮಾನ್ ಮಂದಿರದವರೆಗೆ ರಸ್ತೆಯನ್ನು ಮುಚ್ಚಿದರು.
ಸುದ್ದಿ ತಿಳಿಯುತ್ತಿದ್ದಂತೆಯೆ, ಕೆಲವು ಸ್ಥಳೀಯರೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ, ಮತ್ತಷ್ಟು ಅಡ್ಡಿ ಅಥವಾ ಹಾನಿಯಾಗದಂತೆ ತಡೆಯಲು ಮರದ ಕೊಂಬೆಗಳನ್ನು ಕತ್ತರಿಸಿ, ವಿಮಾನದ ರೆಕ್ಕೆ ಭಾಗವನ್ನು ಹೊರ ತೆಗೆದರು.
ಇದರಿಂದಾಗಿ, ಜನನಿಬಿಡ ರಸ್ತೆಯಾದ ಈ ಭಾಗದಲ್ಲಿ ಕೆಲ ಕಾಲ ಸಾರಿಗೆ ಸಂಚಾರ ತೀವ್ರ ದಟ್ಟನೆಯಾಯಾತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವಾಹನ ಸವಾರರಿಗೆ ತೀವ್ರ ಅನನುಕೂಲವುಂಟಾಯಿತು. ಪೊಲೀಸರು ಶೀಘ್ರವಾಗಿ ತಮ್ಮ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವಲ್ಲಿ ಯಶಸ್ವಿಯಾದರು. ವಿಮಾನದ ರೆಕ್ಕೆ ಭಾಗವನ್ನು ಮರದಿಂದ ಹೊರ ತೆಗೆದ ನಂತರ, ಟ್ರಕ್ ತನ್ನ ಪ್ರಯಾಣವನ್ನು ಮುಂದುವರಿಸಿತು. ಬಳಿಕ ಸಾರ್ವಜನಿಕರಿಗೆ ಈ ಪ್ರದೇಶದಲ್ಲಿ ಸಂಚರಿಸಲು ರಸ್ತೆಯನ್ನು ಮುಕ್ತಗೊಳಿಸಲಾಯಿತು.
ಈ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.







