ಏರ್ ಇಂಡಿಯಾ ವಿಮಾನ ದುರಂತ | ಪರಿಹಾರದ ಕುರಿತಂತೆ ಏರ್ ಇಂಡಿಯಾ ಬೆದರಿಕೆ ಒಡ್ಡುತ್ತಿದೆ: ಮೃತಪಟ್ಟವರ ಕುಟುಂಬದ ಸದಸ್ಯರ ಆರೋಪ

PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದ ಬಳಿಕ ಆರಂಭಿಕ ದಿನಗಳಲ್ಲಿ ಪರಿಹಾರ ಇತ್ಯರ್ಥ ಪ್ರಕ್ರಿಯೆ ಕುರಿತು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ತಮ್ಮ ಮೇಲೆ ಒತ್ತಡ ಹೇರಿದೆ ಎಂದು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಆರೋಪಿಸಿವೆ.
ಪ್ರಶ್ನಾವಳಿಯನ್ನು ಭರ್ತಿ ಮಾಡಲು ವಿಫಲವಾದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಏರ್ ಇಂಡಿಯಾ ತಮಗೆ ಬೆದರಿಕೆ ಹಾಕಿದೆ ಎಂದು ಕುಟುಂಬಗಳು ಆರೋಪಿಸಿವೆ. ಈ ಪ್ರಶ್ನಾವಳಿ ಹಲವು ಕಾನೂನು ಪದಗಳನ್ನು ಒಳಗೊಂಡಿದೆ. ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ವಕೀಲರು ಆರೋಪಿಸಿದ್ದಾರೆ.
ಮೃತಪಟ್ಟವರ ಮೇಲಿನ ತಮ್ಮ ಆರ್ಥಿಕ ಅವಲಂಬನೆಯನ್ನು ಬಹಿರಂಗಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಕುಟುಂಬಗಳು ಆರೋಪಿಸಿವೆ. ಈ ದುರಂತದಲ್ಲಿ ಸಾವನ್ನಪ್ಪಿದ ಬ್ರಿಟೀಷ್ ಪ್ರಜೆಗಳ ಕುಟುಂಬಗಳು ಪರಿಹಾರಕ್ಕಾಗಿ ಏರ್ ಇಂಡಿಯಾ ಹಾಗೂ ಬೋಯಿಂಗ್ ವಿರುದ್ಧ ಮೊಕದ್ದಮೆ ಹೂಡಲು ಚಿಂತಿಸುತ್ತಿವೆ ಎಂಬ ವರದಿಯ ನಡುವೆ ಈ ಆರೋಪ ಕೇಳಿ ಬಂದಿದೆ.
ಸಂತ್ರಸ್ತ ಕುಟುಂಬಗಳಿಗೆ ಕಡಿಮೆ ಪರಿಹಾರ ನೀಡುವ ಮೂಲಕ ವಿಮಾನ ಯಾನ ಸಂಸ್ಥೆ ಕನಿಷ್ಠ 100 ಮಿಲಿಯನ್ ಪೌಂಡ್ ಉಳಿಸಬಹುದು ಎಂದು ಬ್ರಿಟನ್ನ ಕಾನೂನು ಸಂಸ್ಥೆ ಸ್ಟಿವಾರ್ಟ್ಸ್ನ ವೈಮಾನಿಕ ನ್ಯಾಯವಾದಿ ಪೀಟರ್ ನೀನಾನ್ ತಿಳಿಸಿದ್ದಾರೆ.
ಈ ಕುಟುಂಬಗಳನ್ನು ಜನದಟ್ಟಣೆಯ, ತೀವ್ರ ಉಷ್ಣತೆ ಇರುವ ಕತ್ತಲೆ ಕೋಣೆಯಲ್ಲಿ ಇರಿಸಲಾಗಿತ್ತು. ಅವರ ಹಣಕಾಸಿನ ಮಾಹಿತಿಯ ಕುರಿತ ದಾಖಲೆಗಳು ಹಾಗೂ ಸಂಕೀರ್ಣ ಪ್ರಶ್ನಾವಳಿಗಳನ್ನು ಭರ್ತಿ ಮಾಡುವಂತೆ ಸೂಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಅಹ್ಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಕಡಿಮೆ ಮಾಡಲು ಮೃತರ ಮೇಲಿನ ಆರ್ಥಿಕ ಅವಲಂಬನೆಯನ್ನು ಬಹಿರಂಗಪಡಿಸುವ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪವನ್ನು ಏರ್ ಇಂಡಿಯಾ ಶುಕ್ರವಾರ ನಿರಾಕರಿಸಿದೆ.
ಹೇಳಿಕೆಯೊಂದರಲ್ಲಿ ಏರ್ ಇಂಡಿಯಾ ಈ ಪ್ರತಿಪಾದನೆ ಆಧಾರ ರಹಿತ ಹಾಗೂ ನಿಖರವಲ್ಲದ್ದು ಎಂದು ವಿವರಿಸಿದೆ. ಅಲ್ಲದೆ, ಅಂತಹ ಬಹಿರಂಗಪಡಿಸುವಿಕೆಗಳು ಅರ್ಹ ಫಲಾನುಭವಿಗಳು ಮಧ್ಯಂತರ ಪರಿಹಾರವನ್ನು ಸ್ವೀಕರಿಸುವುದನ್ನು ಖಾತರಿಪಡಿಸುವ ಉದ್ದೇಶದ ಪ್ರಮಾಣಿತ ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಿದೆ.







