ಪ್ರಯಾಣಿಕರ ತಾಳ್ಮೆ ಪರೀಕ್ಷಿಸಿದ ಏರ್ ಇಂಡಿಯಾ : ದಿಲ್ಲಿ– ಮುಂಬೈ ಪ್ರಯಾಣಿಕರಿಗೆ 17 ಗಂಟೆ ಕಾಯುವ ಶಿಕ್ಷೆ!
Photo: PTI
ಹೊಸದಿಲ್ಲಿ: ದಿಲ್ಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ರವಿವಾರ ಏರ್ ಇಂಡಿಯಾ ವಿಮಾನದ ಪ್ರಯಾಣಿಕರು ಆರು ಗಂಟೆಗಳ ಕಾಲ ವಿಮಾನದೊಳಗೆ ಕುಳಿತುಕೊಳ್ಳಬೇಕಾಗಿ ಬಂದ ಘಟನೆ ತಡವಾಗಿ ವರದಿಯಾಗಿದೆ. ತೀವ್ರ ಮಂಜಿನ ಕಾರಣ ಕಡಿಮೆ ಗೋಚರತೆಯಿಂದಾಗಿ ಹಲವಾರು ವಿಮಾನಯಾನ ಸಂಸ್ಥೆಗಳು ನೂರಾರು ಹಾರಾಟಗಳನ್ನು ರದ್ದುಗೊಳಿಸಿದ ನಂತರ, ಏರ್ ಇಂಡಿಯಾದ ಬೇಜವಾಬ್ದಾರಿತನದಿಂದ ಪ್ರಯಾಣಿಕರು ತಾಳ್ಮೆ ಕಳೆದುಕೊಂಡರು ಎಂದು ತಿಳಿದುಬಂದಿದೆ.
ವಿಳಂಬವಾದ್ದರಿಂದ ದೀರ್ಘವಾಗಿ ನಿಲ್ದಾಣದಲ್ಲಿ ವಿಮಾನದೊಳಗೆ ಕುಳಿತುಕೊಳ್ಳಬೇಕಾಯಿತು. ಆಹಾರದ ಕೊರತೆ ಮತ್ತು ಹವಾನಿಯಂತ್ರಣ ವ್ಯವಸ್ಥೆ ಕೆಲಸ ಮಾಡದಿರುವುದರಿಂದ ಮಕ್ಕಳು ಚಡಪಡಿಸತೊಡಗಿದರು ಎಂದು ಪ್ರಯಾಣಿಕ ರಿಫ್ಕಾ ವರ್ಮಾ ndtv ಗೆ ತಿಳಿಸಿದ್ದಾರೆ. "ವಿಮಾನವು ಬೆಳಿಗ್ಗೆ 9 ಗಂಟೆಗೆ ಟೇಕ್-ಆಫ್ ಆಗಬೇಕಿತ್ತು. ಹವಾಮಾನ ಪರಿಸ್ಥಿತಿಯನ್ನು ನೋಡಿ ಅದು ವಿಳಂಬವಾಗುವುದು ಸ್ಪಷ್ಟವಾಗಿತ್ತು. ಆದರೆ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ. ಮಧ್ಯಾಹ್ನ 2 ಗಂಟೆಗೆ ವಿಮಾನ ಸಿದ್ಧವಾದಾಗ, ಹಾರಾಟದ ಸಿಬ್ಬಂದಿಯಿಲ್ಲ, ಅವರು ಬೇರೆ ವಿಮಾನಕ್ಕೆ ನಿಯೋಜನೆಯಾಗಿದ್ದಾರೆ ಎಂದು ಹೇಳಿದರು” ಎಂದು ದೂರಿದರು.
“ಪ್ರಯಾಣಿಕರ ಪರಿಸ್ಥಿತಿ ತುಂಬಾ ಕೆಟ್ಟಿತ್ತು. ವಿಮಾನಕ್ಕೆ ಹಾರಾಟ ಸಿಬ್ಬಂದಿ ಬಂದಾಗ ಸಂಜೆ 5.30 ಆಗಿತ್ತು. ನಾವು ರಾತ್ರಿ 8 ಗಂಟೆಯ ಸುಮಾರಿಗೆ ವಿಮಾನ ಹತ್ತಿ ನೋಡಿದರೆ ಪೈಲಟ್ ಇರಲಿಲ್ಲ. ಇದು ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅಥವಾ ಹಾರಾಟದ ಸಿಬ್ಬಂದಿಯ ತಪ್ಪು ಎಂದು ನಾನು ಭಾವಿಸುವುದಿಲ್ಲ. ಇದು ಕಳಪೆ ನಿರ್ವಹಣೆ. ಇದಕ್ಕೆ ಸಂಸ್ಥೆಯೇ ಹೊಣೆ. ವಿಮಾನ 17 ಗಂಟೆಗಳ ಕಾಲ ವಿಳಂಬವಾದರೂ ಪ್ರಯಾಣಿಕರಿಗೆ ಆಹಾರ ಒದಗಿಸಿರಲಿಲ್ಲ. ಕೇವಲ ಚಿಪ್ಸ್ ಪ್ಯಾಕೆಟ್ಗಳು ಮಾತ್ರ ಇತ್ತು" ಎಂದು ಅವರು ದೂರಿದ್ದಾರೆ.