ವಾಯು ಮಾಲಿನ್ಯದಿಂದ ಭಾರತೀಯರ ಜೀವಿತಾವಧಿ 3.5 ವರ್ಷ ಕಡಿತ: ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 28: ಭಾರತದ ಜನರು ವಾರ್ಷಿಕ ಸರಾಸರಿ ವಾಯು ಮಾಲಿನ್ಯ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ದೇಶದ ಅತ್ಯಂತ ಪರಿಶುದ್ಧ ಪ್ರದೇಶಗಳ ವಾಯು ಗುಣಮಟ್ಟ ಜಾಗತಿಕ ವಾಯುಗುಣಮಟ್ಟ ಮಾನದಂಡಕ್ಕೆ ಸರಿಸಮವಾದರೆ, ಅಲ್ಲಿನ ಜನರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ಹೊಸ ವರದಿಯೊಂದು ಹೇಳಿದೆ.
ಷಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ (ಇಪಿಐಸಿ)ನ 2025ರ ವರದಿಯಲ್ಲಿ, ಅಪಾಯಕಾರಿ ಪಿಎಂ 2.5ರಷ್ಟು ಸಾಂದ್ರತೆಯ ದೂಳಿನ ಕಣ 2022ನೇ ಸಾಲಿಗೆ ಹೋಲಿಸಿದರೆ, 2023ರಲ್ಲಿ ಹೆಚ್ಚಳವಾಗಿದೆ ಎಂದಿದೆ.
ಈ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ 8 ಪಟ್ಟು ಹೆಚ್ಚಾಗಿದೆ. ಈ ಜಾಗತಿಕ ಮಾನದಂಡವನ್ನು ಪೂರೈಸಲು ಈ ಮಾಲಿನ್ಯವನ್ನು ಕಡಿಮೆ ಮಾಡುವುದರಿಂದ ಭಾರತೀಯ ಸರಾಸರಿ ಜೀವಿತಾವಧಿ 3.5 ವರ್ಷ ಹೆಚ್ಚಾಗುತ್ತದೆ ಎಂದು ಅದು ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ 2021ರ ಗಾಳಿಯ ಗುಣಮಟ್ಟ ಮಾರ್ಗಸೂಚಿ ಪ್ರಕಾರ ಪಿಎಂ 2.5ಕ್ಕೆ ವಾರ್ಷಿಕ ಸರಾಸರಿ ಮಿತಿ ಘನ ಮೀಟರ್ಗೆ 5 ಮೈಕ್ರೋ ಗ್ರಾಂ. ಅದೇ ರೀತಿ ಪಿಎಂ 10ಕ್ಕೆ ವಾರ್ಷಿಕ ಸರಾಸರಿ ಮಿತಿ ಪ್ರತಿ ಘನ ಮೀಟರ್ಗೆ 15 ಮೈಕ್ರೋ ಗ್ರಾಂ.
ಆದರೆ, ಭಾರತದಲ್ಲಿ ಮಾನದಂಡ ಭಿನ್ನವಾಗಿದ್ದು, ಪಿಎಂ 2.5ಕ್ಕೆ ವಾರ್ಷಿಕ ಮಿತಿ ಪ್ರತಿ ಘನ ಮೀಟರ್ಗೆ 40 ಮೈಕ್ರೋ ಗ್ರಾಂ ಆಗಿದೆ. ಪಿಎಂ 10ಕ್ಕೆ ವಾರ್ಷಿಕ ಮಿತಿ ಪ್ರತಿ ಘನ ಮೀಟರ್ಗೆ 60 ಮೈಕ್ರೋ ಗ್ರಾಂ ಆಗಿದೆ.
ವಾಸ್ತವವಾಗಿ ದೇಶದಲ್ಲಿ ಶೇ. 46ರಷ್ಟು ಜನರು ಪಿಎಂ 2.5 ಮಟ್ಟ ರಾಷ್ಟ್ರೀಯ ಮಾನದಂಡವಾದ 40 ಮೈಕ್ರೋ ಗ್ರಾಂ.ಗಿಂತಲೂ ಅಧಿಕವಾಗಿರುವ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. ಆದರೆ, ಈ ಗುಣಮಟ್ಟಕ್ಕೆ ಮಾಲಿನ್ಯವನ್ನು ನಿಯಂತ್ರಿಸಿದರೆ ಜನರ ಜೀವಿತಾವಧಿ 1.5 ವರ್ಷ ಅಧಿಕವಾಗಬಹುದು.







