ಪಟಾಕಿಯಿಂದ ದಿಲ್ಲಿ, ಕೋಲ್ಕತಾದಲ್ಲಿ ವಾಯುಗುಣಮಟ್ಟ ಕುಸಿತ | ಜನಸಾಮಾನ್ಯರ ಆರೋಗ್ಯ ಅಪಾಯದಲ್ಲಿ : ತಜ್ಞರ ಕಳವಳ

ಸಾಂದರ್ಭಿಕ ಚಿತ್ರ | Photo Credit : ANI
ಹೊಸದಿಲ್ಲಿ,ಅ.21: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿಗಳ ವ್ಯಾಪಕ ಸಿಡಿಸುವಿಕೆಯಿಂದಾಗಿ ಭಾರತದ ಮಹಾನಗರಗಳಾದ ಹೊಸದಿಲ್ಲಿ ಹಾಗೂ ಕೋಲ್ಕತಾದಲ್ಲಿ ವಾಯುಗುಮಟ್ಟದಲ್ಲಿ ತೀವ್ರ ಕುಸಿತವಾಗಿದ್ದು, ಜನಸಾಮಾನ್ಯರ ಆರೋಗ್ಯದ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಪಟಾಕಿ ಬಳಕೆಯ ಬಗ್ಗೆ ಹಲವಾರು ನಿರ್ಬಂಧ‘ಗಳನ್ನು ಹೇರಿರುವ ಹೊರತಾಗಿಯೂ, ವ್ಯಾಪಕವಾಗಿ ಪಟಾಕಿಗಳನ್ನು ಸಿಡಿಸುತ್ತಿರುವುದರ ಪರಿಣಾಮವಾಗಿ ಹೊಸದಿಲ್ಲಿಯಲ್ಲಿ ವಾಯುಗುಣಮಟ್ಟದ ಸೂಚ್ಯಂಕವು ‘ತೀವ್ರ’ತೆಯ ಶ್ರೇಣಿಯನ್ನು ತಲುಪಿದೆ. ಇದರಿಂದಾಗಿ ಹೊಸದಿಲ್ಲಿ ಹಾಗೂ ಆಸುಪಾಸಿನ ಉಪನಗರಗಳ ನಿವಾಸಿಗಳ ಆರೋಗ್ಯದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ದಿಲ್ಲಿಯ ಬಹುತೇಕ ಪ್ರಾಂತಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕವು 400 ಎಂ ಆಗಿದ್ದು, ಇದು ತೀವ್ರಸ್ವರೂಪದ್ದಾಗಿದೆ. ವಿಶೇಷವಾಗಿ ಮಕ್ಕಳಿಗೆ, ವೃದ್ಧರಿಗೆ, ಉಸಿರಾಟದ ಸಮಸ್ಯೆಗಳು ಹಾಗೂ ಆರೋಗ್ಯದ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಅನಾರೋಗ್ಯಕರವೆಂದು ಪರಿಗಣಿಸಲಾಗಿದೆ.
ಹೊಸದಿಲ್ಲಿ ನಗರದಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಗ್ಗೆ 7:00 ಗಂಟೆಯ ವೇಳೆಗೆ 451 ಎಂ ಆಗಿದ್ದು, ರಾಷ್ಟ್ರೀಯ ವಾಯುಸುರಕ್ಷತಾ ಮಿತಿಗಿಂತ 1.8 ಪಟ್ಟು ಅಧಿಕವಾಗಿದೆ. ಇದು ಶಾಸನಾತ್ಮಕ ನಿರೀಕ್ಷೆಗಳಿಗೂ ಹಾಗೂ ಸಾರ್ವಜನಿಕರ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿರುವುದರ ಬಗ್ಗೆ ಬೆಳಕು ಚೆಲ್ಲುತ್ತಿದೆ. ನೊಯ್ಡಾ ಹಾಗೂ ಗುರ್ಗಾಂವ್ ಸೇರಿದಂತೆ ಉಪನಗರಗಳಲ್ಲಿ ಎಕ್ಯೂಐ ಕ್ರಮವಾಗಿ 407 ಹಾಗೂ 402 ಆಗಿದೆ. ವಾಯುಮಾಲಿನ್ಯವು ದಿಲ್ಲಿಯ ಗಡಿಯಾಚೆಗೂ ಹರಡಿರುವುದಾಗಿ ವರದಿಗಳು ತಿಳಿಸಿವೆ.
ಕಳೆದ ವರ್ಷದಲ್ಲಿ ದೀಪಾವಳಿಗೆ ಮುನ್ನ ದಿಲ್ಲಿಯ ವಾಯುಗುಣಮಟ್ಟ ಸೂಚ್ಯಂಕವು ಸರಾಸರಿ 359 ಆಗಿದ್ದು ‘ಅತ್ಯಂತ ಕಳಪೆ’ ಶ್ರೇಣಿಯೆಂದು ದಾಖಲಾಗಿದೆ. ಈ ವರ್ಷದ ವಾಯುಗುಣಟ್ಟ ಸೂಚ್ಯಂಕದ ಮಟ್ಟದಲ್ಲಿ ತೀವ್ರ ಏರಿಕೆಯಾಗಿದ್ದು, ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೀಡು ಮಾಡಲಾಗಿದೆ. ಅಶೋಕ ವಿಹಾರದಲ್ಲಿ ಎಕ್ಯೂಐ 445, ಆನಂದ್ ವಿಹಾರ್ನಲ್ಲಿ 440, ವಾಝಿರ್ಪುರದಲ್ಲಿ 435 ಹಾಗೂ ದ್ವಾರಕಾದಲ್ಲಿ 422 ಆಗಿದ್ದು, ಇವೆಲ್ಲವೂ ತೀವ್ರತೆಯ ವಲಯಕ್ಕೆ ಸೇರ್ಪಡೆಯಾಗಿದೆ.
ಕೋಲ್ಕತಾದಲ್ಲಿ ಅನಾರೋಗ್ಯಕರ ಮಟ್ಟ ತಲುಪಿದ ಎಕ್ಯೂಐ
ದೀಪಾವಳಿ ಹಾಗೂ ಕಾಳಿಪೂಜೆ ಹಿನ್ನೆಲೆ ವ್ಯಾಪಕವಾಗಿ ಪಟಾಕಿಗಳನ್ನು ಸಿಡಿಸುತ್ತಿರುವುದರಿಂದ ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ಅನಾರೋಗ್ಯಕರ ಮಟ್ಟವನ್ನು ತಲುಪಿದೆ.
ಕಾಳಿ ಪೂಜೆ ಹಾಗೂ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವ ಅವಧಿಯನ್ನು ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯ ನಡುವಿನ ಅವಧಿಗೆ ನಿಗದಿಪಡಿಸುವ ಸುತ್ತೋಲೆಯನ್ನು ಕೋಲ್ಕತಾ ಪೊಲೀಸರು ಜಾರಿಗೊಳಿಸಿದ್ದಾರೆ.
ಕಾಳಿಪೂಜೆಯ ದಿನವಾದ ಸೋಮವಾರ ಸಂಜೆ ಐದು ಗಂಟೆಯಿಂದಲೇ ಪಟಾಕಿ ಸಿಡಿತ ಆರಂಭಗೊಂಡಿದ್ದು, ಅದು ಮಧ್ಯರಾತ್ರಿಯ ಆನಂತರವೂ ಮುಂದುವರಿದಿದೆ. ನ್ಯಾಯಾಲಯದ ನಿರ್ದೇಶದಂತೆ ಪಟಾಕಿಗಳನ್ನು ಸಿಡಿಸುವಿಕೆಗೆ ಹೇರಿರುವ ನಿಷೇಧವನ್ನು ಸೋಮವಾರ ವ್ಯಾಪಕವಾಗಿ ಉಲ್ಲಂಘಿಸಲಾಗಿದೆಯೆಂದು ವಿವಿ ನಾಗರಿಕ ಸಂಘಟನೆಗಳು ಆಪಾದಿಸಿವೆ.
ಕೋಲ್ಕತಾದ ಉತ್ತರ ಹೊರವಲಯದಲ್ಲಿರುವ ನ್ಯೂಟೌನ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 199 ಆಗಿದ್ದು, ಅನಾರೋಗ್ಯಕರ ಶ್ರೇಣಿಗೆ ಸೇರ್ಪಡೆಯಾಗಿದೆ. ಪಟಾಕಿಗಳ ವ್ಯಾಪಕ ಸಿಡಿಸುವಿಕೆಯಿಂದಾಗಿ ನಗರದ ಇತರ ‘ಭಾಗಗಳಲ್ಲಿಯೂ ವಾಯು ಮಾಲಿನ್ಯದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.







