ವಾಯುಮಾಲಿನ್ಯ | ವಿಶ್ವಸಂಸ್ಥೆಯ ಮಾನದಂಡಕ್ಕೆ ಬದ್ಧವಾಗಬೇಕಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

Photo Credit : PTI
ಹೊಸದಿಲ್ಲಿ,ಡಿ.11: ವಾಯುಮಾಲಿನ್ಯದ ಕುರಿತಾಗಿ ಭಾರತಕ್ಕೆ ತನ್ನದೇ ಆದ ಮಾನದಂಡವಿದೆ. ವಿಶ್ವಸಂಸ್ಥೆ ಸೇರಿದಂತೆ ವಾಯುಮಾಲಿನ್ಯಕ್ಕೆ ಸಂಬಂಧಿಸಿ ಜಾರಿಗೊಳಿಸಲಾಗುವ ಜಾಗತಿಕ ಮಾನದಂಡಗಳು ಕೇವಲ ಮಾರ್ಗದರ್ಶಕ ದಾಖಲೆಗಳಾಗುತ್ತವೆಯೇ ಹೊರತು ಅವು ಬದ್ಧ ಮಾನದಂಡಗಳಲ್ಲವೆಂದು ಕೇಂದ್ರ ಸರಕಾರ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿಗಳು ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ವಿವಿಧ ದೇಶಗಳಿಗೆ ಶಿಫಾರಸು ಮೌಲ್ಯಗಳಾಗಿ ಕಾರ್ಯ ನಿರ್ವಹಿಸುತ್ತವೆಯೇ ಹೊರತು ಬದ್ಧ ಮಾನದಂಡವಾಗಿ ಅಲ್ಲವೆಂದು ಕೇಂದ್ರದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ.
ಆದಾಗ್ಯೂ ಕೆಲವು ದೇಶಗಳು ಭೌಗೋಳಿಕತೆ, ಪಾರಿಸಾರಿಕ ಅಂಶಗಳು, ಹಿನ್ನೆಲೆಯ ಮಟ್ಟಗಳು, ಸಾಮಾಜಿಕ -ಆರ್ಥಿಕ ಸ್ಥಾನಮಾನ ಹಾಗೂ ರಾಷ್ಟ್ರೀಯ ಸನ್ನಿವೇಶಗಳನ್ನು ಆಧರಿಸಿ ದೇಶಗಳು ತಮ್ಮದೇ ಆದ ವಾಯು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸುತ್ತವೆ’’ ಎಂದು ಸಿಂಗ್ ಅವರು ರಾಜ್ಯಸಭೆಯಲ್ಲಿ ಸಿಪಿಎಂ ಸಂಸದ ವಿ. ಶಿವದಾಸನ್ ಅವರಿಗೆ ತಿಳಿಸಿದರು.
ಮಾಲಿನ್ಯ ಮಟ್ಟದ ಕುರಿತಾದ ನಗರಗಳ ಜಾಗತಿಕ ರ್ಯಾಂಕಿಂಗ್ ಅನ್ನು ಅಧಿಕೃತ ಪ್ರಾಧಿಕಾರದ ಮೂಕ ನಡೆಸಲಾಗುತ್ತಿಲ್ಲವೆಂದು ಸಚಿವರು ಹೇಳಿದರು.
2024ರಲ್ಲಿ ಜಗತ್ತಿನ 20 ಅತ್ಯಂತ ಮಾಲಿನ್ಯಭರಿತ ನಗರಗಳಲ್ಲಿ ಭಾರತ ಕೂಡಾ ಒಂದಾಗಿದೆ ಎಂದು ಸ್ವಿಸ್ ಮೂಲದ ವಾಯುಗುಣಮಟ್ಟ ತಂತ್ರಜ್ಞಾನ ಸಂಸ್ಥೆ ಐಕ್ಯೂಎಐಆರ್ ಪ್ರಕಟಿಸಿರುವ ಜಾಗತಿಕ ವಾಯುಗುಣಮಟ್ಟದ ವರದಿ ತಿಳಿಸಿದೆ.







