ವಾಯು ಮಾಲಿನ್ಯ | 50 ಶೇ. ಸರಕಾರಿ, ಖಾಸಗಿ ಉದ್ಯೋಗಿಗಳಿಗೆ Work From Home; ಕಾರ್ಮಿಕರಿಗೆ 10,000 ರೂ. ಪರಿಹಾರ: ದಿಲ್ಲಿ ಸರಕಾರ

Photo Credit : PTI | Freepik
ಹೊಸದಿಲ್ಲಿ, ಡಿ. 17: ದಿಲ್ಲಿಯ ಬಿಗಡಾಯಿಸುತ್ತಿರುವ ವಾಯು ಮಾಲಿನ್ಯವನ್ನು ತಹಬಂದಿಗೆ ತರುವ ಪ್ರಯತ್ನವಾಗಿ, ದಿಲ್ಲಿ ಸರಕಾರವು ಸರಕಾರಿ ಮತ್ತು ಖಾಸಗಿ ಎರಡೂ ಸಂಸ್ಥೆಗಳ 50 ಶೇಕಡ ಉದ್ಯೋಗಿಗಳಿಗೆ ಗುರುವಾರದಿಂದ ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಉದ್ಯೋಗಿಗಳ ದೈನಂದಿನ ಪ್ರಯಾಣವನ್ನು ಕಡಿತಗೊಳಿಸಿ ವಾಹನಗಳ ಹೊಗೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ದಿಲ್ಲಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಹೇಳಿದರು.
ಈ ನಿಯಮವನ್ನು ಅನುಸರಿಸಲು ನಿರಾಕರಿಸುವ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ಅದೇ ವೇಳೆ, ಈ ನಿರ್ಬಂಧಗಳು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಅವರು ಒಪ್ಪಿಕೊಂಡರು ಹಾಗೂ ಕೆಲಸ ಕಳೆದುಕೊಳ್ಳುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 10,000 ರೂ. ಪರಿಹಾರವನ್ನೂ ಘೋಷಿಸಿದರು.
ಗ್ರೇಡಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್ (ಜಿಆರ್ಎಪಿ)ನ ಮೂರನೇ ಹಂತವು ಕಳೆದ 16 ದಿನಗಳಿಂದ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದರು. ಈ ಅವಧಿಯಲ್ಲಿ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ನಿರ್ಬಂಧವಿರುವುದರಿಂದ ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟವನ್ನು ದೂರ ಮಾಡುವುದಕ್ಕಾಗಿ ಕಾರ್ಮಿಕರಿಗೆ 10,000 ರೂ. ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.







