ದಿಲ್ಲಿ ವಾಯು ಗುಣಮಟ್ಟ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ; ವರದಿ

Photo: PTI
ಹೊಸದಿಲ್ಲಿ: ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟ ಹೊಗೆ, ಕೊರೆಯುವ ಚಳಿ ಹಾಗೂ ಮಂಜಿನ ಹೊದಿಕೆ ಆವರಿಸಿದ್ದು, ದಿಲ್ಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ರವಿವಾರ ʼಗಂಭೀರʼ ವರ್ಗಕ್ಕೆ ಹತ್ತಿರದಲ್ಲಿದೆ ಎಂದು ವರದಿಯಾಗಿದೆ.
ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯುಐ) ಹಗಲಿನಲ್ಲಿ ತೀವ್ರವಾಗಿ ಏರಿದೆ. ರಾತ್ರಿ 11 ಗಂಟೆಗೆ 410ಕ್ಕೆ ತಲುಪಿದ್ದು, ‘‘ತೀವ್ರ’’ ಮಿತಿಯನ್ನು ದಾಟಿದೆ. ರವಿವಾರ ಬೆಳಗ್ಗೆ 6.30ಕ್ಕೆ ವಾಯು ಗುಣಮಟ್ಟ ಸೂಚ್ಯಾಂಕ (ಎಐಕ್ಯು) ಸ್ವಲ್ಪ ಸುಧಾರಣೆ ಕಂಡಿತು. ಆದರೆ, 396ರ ತೀವ್ರ ಮಟ್ಟದ ಸಮೀಪವೇ ಇತ್ತು ಎಂದು ದಿಲ್ಲಿಯ ಭೂ ವಿಜ್ಞಾನಗಳ ಸಚಿವಾಲಯದ ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆ ವರದಿ ಮಾಡಿದೆ.
20.12.2025ರಿಂದ 22.12.2025ರ ವರೆಗೆ ವಾಯು ಗುಣಮಟ್ಟ ತೀವ್ರ ವರ್ಗದಲ್ಲಿ ಇರುವ ಸಾಧ್ಯತೆ ಇದೆ. 23.12.2015ರಂದು ವಾಯು ಗುಣಮಟ್ಟ ಅತ್ಯಂತ ಕಳಪೆ ವರ್ಗದಲ್ಲಿ ಇರುವ ಸಾಧ್ಯತೆ ಇದೆ ಎಂದು ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆ ತಿಳಿಸಿದೆ.
ಬುಲೆಟಿನ್ ಪ್ರಕಾರ ಮುಂದಿನ 6 ದಿನಗಳ ಮುನ್ಸೂಚನೆ ಚಿಂತಾಜನಕವಾಗಿದೆ. ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಅಥವಾ ಗಂಭೀರ ಮಟ್ಟದಲ್ಲಿರಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆ್ಯಪ್ ನ ದತ್ತಾಂಶ ರಾಜಧಾನಿಯಾದ್ಯಂತದ ಹಲವು ಮೇಲ್ವಿಚಾರಣಾ ಕೇಂದ್ರಗಳು ಬೆಳಗಿನ ಜಾವ ಗಾಳಿಯ ಗುಣಮಟ್ಟ ಅಂತ್ಯಂತ ಕಳಪೆಯಾಗಿದೆ ಎಂದು ವರದಿ ಮಾಡಿರುವುದನ್ನು ತೋರಿಸಿದೆ.
ಬೆಳಗ್ಗೆ 6.05ಕ್ಕೆ ಚಾಂದನಿ ಚೌಕ್ (455), ವಝೀರ್ಪುರ (499), ರೋಹಿನಿ (444), ಜಹಾಗೀರಪುರಿ (444), ಆನಂದ್ ವಿಹಾರ್ (438) ಹಾಗೂ ಮುಂಡ್ಕಾ (436) ವಾಯು ಮಾಲಿನ್ಯದ ತೀವ್ರ ಹೊಡೆತಕ್ಕೆ ಗುರಿಯಾಗಿವೆ. ಈ ಸ್ಥಳಗಳು ‘‘ತೀವ್ರ’’ ವರ್ಗದಲ್ಲಿದೆ.
97 ವಿಮಾನಗಳ ಹಾರಾಟ ರದ್ದು:
ದಿಲ್ಲಿಯಲ್ಲಿ ಮುಂಜಿನಿಂದಾಗಿ ವಿಮಾನ ಹಾಗೂ ರೈಲು ಸಂಚಾರಕ್ಕೆ ತಡೆ ಉಂಟಾಗಿದೆ. 48 ಆಗಮನ ಹಾಗೂ 49 ನಿರ್ಗಮನ ವಿಮಾನಗಳು ಸೇರಿದಂತೆ ದಿಲ್ಲಿ ವಿಮಾನ ನಿಲ್ದಾಣದಿಂದ ಒಟ್ಟು 97 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. 200ಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬವಾಗಿವೆ. ಉತ್ತರ ರೈಲ್ವೆಯ 50ಕ್ಕೂ ಅಧಿಕ ರೈಲುಗಳ ವಿಳಂಬವಾಗಿ ಸಂಚರಿಸಿವೆ.







