ಭಾರತದಲ್ಲಿ ಎಚ್125 ಹೆಲಿಕಾಪ್ಟರ್ಗಳ ಉತ್ಪಾದನೆ ಮಾಡಲಿರುವ ಏರ್ಬಸ್

Airbus H125 Helicopter. Photo: Wikimedia
ಹೊಸದಿಲ್ಲಿ, ಜು. 21: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್)ನೊಂದಿಗಿನ ಸಹಭಾಗಿತ್ವದಲ್ಲಿ ಭಾರತದಲ್ಲಿ ಎಚ್125 ಹೆಲಿಕಾಪ್ಟರ್ಗಳ ಉತ್ಪಾದನೆಗೆ ಎಂಟು ಸ್ಥಳಗಳನ್ನು ಒಳಗೊಂಡ ಕಿರುಪಟ್ಟಿಯನ್ನು ಫ್ರಾನ್ಸ್ನ ಕಂಪೆನಿ ಏರ್ಬಸ್ ಹೆಲಿಕಾಪ್ಟರ್ಸ್ ಸಿದ್ಧಪಡಿಸಿದೆ. ಏರ್ಬಸ್ ಹೆಲಿಕಾಪ್ಟರ್ಸ್ ಜಗತ್ತಿನ ತನ್ನ ನಾಲ್ಕನೇ ಉತ್ಪಾದನಾ ಸಂಸ್ಥೆಯನ್ನು ಭಾರತದಲ್ಲಿ ತೆರೆಯುತ್ತಿದೆ.
‘‘ಉತ್ಪಾದನಾ ಸ್ಥಳದ ಅಂತಿಮ ವಿಶ್ಲೇಷಣೆ ನಡೆಯುತ್ತಿದೆ. ಭಾರತದಲ್ಲಿ ಎಚ್125 ಹೆಲಿಕಾಪ್ಟರ್ಗಳನ್ನು ಎಲ್ಲಿ ನಿರ್ಮಿಸಲಾಗುವುದು ಎಂಬ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು. ಸಂಭಾವ್ಯ ಸ್ಥಳವು ನಮ್ಮ ಉದ್ಯೋಗಿಗಳಿಗೆ ಎಷ್ಟು ಆಕರ್ಷಕವಾಗಿರುತ್ತದೆ, ಕೈಗಾರಿಕಾ ಚಟುವಟಿಕೆಗಳಿಗೆ ಅದು ಎಷ್ಟು ಹೊಂದಿಕೊಳ್ಳುತ್ತದೆ ಮತ್ತು ಸಾಗಣೆ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಆಧರಿಸಿ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ’’ ಎಂದು ಏರ್ಬಸ್ ಹೆಲಿಕಾಪ್ಟರ್ಸ್ನ ಜಾಗತಿಕ ಬಿಝ್ನೆಸ್ನ ಕಾರ್ಯಕಾರಿ ಉಪಾಧ್ಯಕ್ಷ ಒಲಿವಿಯೆ ಮಿಶ್ಲೋನ್ ಹೇಳಿದ್ದಾರೆ.
ನೂತನ ಉತ್ಪಾದನಾ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವು ಈ ವರ್ಷದ ಕೊನೆಯ ವೇಳೆಗೆ ನಡೆಯುವ ನಿರೀಕ್ಷೆಯಿದೆ. ಏರ್ಬಸ್-ಟಾಟಾ ಜಂಟಿ ಉದ್ಯಮವು ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್ಗಳನ್ನು ನಿರ್ಮಿಸುವುದು. ಬಳಿಕ, ಬೇಡಿಕೆ ಹೆಚ್ಚಿದಂತೆ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು. ಎಚ್125 ಹೆಲಿಕಾಪ್ಟರ್ಗಳನ್ನು ದಕ್ಷಿಣ ಏಶ್ಯದ ದೇಶಗಳಿಗೆ ರಫ್ತು ಮಾಡಲಾಗುವುದು.
ಏರ್ಬಸ್ನ ಮರಿಗ್ನಾನ್ ಹೆಲಿಕಾಪ್ಟರ್ ಕಾರ್ಖಾನೆಯಲ್ಲಿ ನಡೆದ ಭಾರತೀಯ ಪತ್ರಕರ್ತರೊಂದಿಗಿನ ಸಂವಹನದ ವೇಳೆ ಮಿಶ್ಲೋನ್ ಮಾಹಿತಿಗಳನ್ನು ನೀಡಿದ್ದಾರೆ. ಈ ಹೆಲಿಕಾಪ್ಟರ್ ಕಾರ್ಖಾನೆಯನ್ನು 1939ರಲ್ಲಿ ಸ್ಥಾಪಿಸಲಾಗಿತ್ತು.
2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ನಡುವೆ ನಡೆದ ಮಾತುಕತೆಗಳ ವೇಳೆ, ಹೆಲಿಕಾಪ್ಟರ್ಗಳನ್ನು ದೇಶದಲ್ಲಿ ಜೋಡಿಸುವ ಜಂಟಿ ಯೋಜನೆಯನ್ನು ಪ್ರಕಟಿಸಲಾಗಿತ್ತು.
ಏರ್ಬಸ್ ಭಾರತದಲ್ಲಿ ಸ್ಥಾಪಿಸುತ್ತಿರುವ ಎರಡನೇ ಅಂತಿಮ ಹಂತದ ಜೋಡಣಾ ಕೇಂದ್ರ ಇದಾಗಲಿದೆ. 21,935 ಕೋಟಿ ರೂಪಾಯಿ ವೆಚ್ಚದ ಯೋಜನೆಯು ಭಾರತೀಯ ವಾಯು ಪಡೆಯ ಆಧುನೀಕರಣಕ್ಕಾಗಿ ಐವತ್ತಾರು ಸಿ-295 ಹೆಲಿಕಾಪ್ಟರ್ಗಳನ್ನು ಪೂರೈಸಲಿದೆ.







