ದೈನಂದಿನ ಚಟುವಟಿಕೆಗಳಿಗೆ ಮೊಬೈಲ್ ಬಳಸದ ಅಜಿತ್ ದೋವಲ್!

PC:x.com/ndtv
ಹೊಸದಿಲ್ಲಿ: ಭಾರತದ ‘ಸ್ಪೈಮಾಸ್ಟರ್’ ಅಥವಾ ‘ಜೇಮ್ಸ್ ಬಾಂಡ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ತಮ್ಮ ದಿನನಿತ್ಯದ ಅಧಿಕೃತ ಕಾರ್ಯಗಳಲ್ಲಿ ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಬಳಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಇಲ್ಲಿನ ಭಾರತ್ ಮಂಟಪಂನಲ್ಲಿ ನಡೆದ ‘ವಿಕಸಿತ ಭಾರತ ಯುವ ನಾಯಕ ಸಂವಾದ–2026’ರ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ದೈನಂದಿನ ಕೆಲಸಗಳಿಗೆ ಮೊಬೈಲ್ ಅಥವಾ ಇಂಟರ್ನೆಟ್ ಬಳಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಇಂಟರ್ನೆಟ್ ಬಳಸುವುದಿಲ್ಲ ಎನ್ನುವುದು ಸತ್ಯ. ಕುಟುಂಬ ಸಂಬಂಧಿತ ವಿಚಾರಗಳು ಅಥವಾ ವಿದೇಶದಲ್ಲಿರುವ ಕೆಲವರೊಂದಿಗೆ ಮಾತನಾಡಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ದೂರವಾಣಿ ಬಳಸುತ್ತೇನೆ” ಎಂದು ಹೇಳಿದರು.
2014ರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ದೋವಲ್ ಅವರು, ವಿಶೇಷವಾಗಿ ಯುವಕರಿಗೆ ಸರಿಯಾದ ಸಮಯದಲ್ಲಿ ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಅತ್ಯಂತ ಮುಖ್ಯವೆಂದು ಹೇಳಿದರು. “ಮೊದಲ ಹೆಜ್ಜೆ ಇಡುವ ಮೊದಲು ಮುಂದಿನ ಎರಡು ಹೆಜ್ಜೆಗಳ ಪರಿಣಾಮ ಏನಾಗಲಿದೆ ಎಂಬುದನ್ನು ಆಲೋಚಿಸುವುದು ಅಗತ್ಯ” ಎಂದು ಮಾಜಿ ಗುಪ್ತಚರ ವಿಭಾಗದ ನಿರ್ದೇಶಕರಾದ ಅವರು ಸಲಹೆ ನೀಡಿದರು.
“ನಮ್ಮ ಇತಿಹಾಸ ನೋವಿನಿಂದ ಕೂಡಿದೆ. ದಾಳಿ, ಅಧೀನತೆ ಮತ್ತು ಅವಮಾನಗಳ ಕಹಿ ಅನುಭವ ನಮಗಿದೆ. ನಾವು ಒಮ್ಮೆ ಅತ್ಯಂತ ಪ್ರಗತಿಶೀಲ ನಾಗರಿಕತೆಯಾಗಿದ್ದೆವು. ಆದರೆ ನಮ್ಮ ಭದ್ರತೆಗೆ ಇರುವ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದೆವು. ಇತಿಹಾಸ ನಮಗೆ ಪಾಠ ಕಲಿಸಿದೆ. ಆ ಪಾಠವನ್ನು ಮರೆಯಬಾರದು. ಯುವಕರು ಅದನ್ನು ಮರೆತರೆ, ಅದು ದೇಶಕ್ಕೆ ದುರಂತವಾಗಲಿದೆ” ಎಂದು ದೋವಲ್ ಎಚ್ಚರಿಸಿದರು.
ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯ ಮಹತ್ವವನ್ನು ವಿವರಿಸಿದ ಅವರು, “ನಾನು ಯುವಕನಾಗಿದ್ದಾಗ ಮತ್ತು ಇಂದಿನ ನನ್ನಲ್ಲಿ ಒಂದೇ ಸಾಮಾನ್ಯ ಗುಣವಿದೆ. ಅದು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ. ನಿರ್ಧಾರಗಳು ಯಾವಾಗಲೂ ನಿಮ್ಮ ಜೊತೆಯಲ್ಲೇ ಇರುತ್ತವೆ. ಯುವಕರು ದಿನನಿತ್ಯ ಸಣ್ಣ ಹಾಗೂ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಾಲಕ್ರಮೇಣ ಆ ಸಣ್ಣ ನಿರ್ಧಾರಗಳೇ ಜೀವನದ ದೊಡ್ಡ ತೀರ್ಮಾನಗಳಾಗಿ ಪರಿವರ್ತಿಸುತ್ತವೆ” ಎಂದು ಹೇಳಿದರು.
ಭಾರತದ ಭವಿಷ್ಯದ ಬಗ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದ ದೋವಲ್ ಅವರು, “ಭಾರತ ಖಂಡಿತವಾಗಿಯೂ ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿಯಾದ ರಾಷ್ಟ್ರವಾಗಿ ರೂಪಾಂತರಗೊಳ್ಳಲಿದೆ. ಆ ಅಭಿವೃದ್ಧಿಯ ದಾರಿಯಲ್ಲಿ ದೇಶವನ್ನು ಮುನ್ನಡೆಸುವವರು ಯಾರು ಎಂಬುದೇ ಪ್ರಮುಖ ಪ್ರಶ್ನೆ. ನೀವು ‘ವಿಕಸಿತ ಭಾರತ’ದ ಮಾರ್ಗದಲ್ಲಿ ನಾಯಕರು ಆಗಬೇಕೆಂದಿದ್ದರೆ, ಈಗಿನಿಂದಲೇ ನಿರ್ಧಾರಗಳನ್ನು ಕೈಗೊಳ್ಳಬೇಕು. ಆ ನಿರ್ಧಾರಗಳು ಇಂದಿನ ಅಗತ್ಯಕ್ಕೆ ಮಾತ್ರ ಸೀಮಿತವಾಗದೇ, ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರಬೇಕು” ಎಂದು ಹೇಳಿದರು.







