ನನ್ನ ಉದ್ದೇಶ ಹಸ್ತಕ್ಷೇಪ ಮಾಡುವುದಾಗಿರಲಿಲ್ಲ: ಅಜಿತ್ ಪವಾರ್ ಸ್ಪಷ್ಟನೆ

ಅಜಿತ್ ಪವಾರ್ | PC : PTI
ಮುಂಬೈ: ಅಕ್ರಮವಾಗಿ ಮಣ್ಣು ಅಗೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಮಹಿಳಾ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣರಿಗೆ “ಕಾರ್ಯಾಚರಣೆ ನಿಲ್ಲಿಸಿ, ಅಲ್ಲಿಂದ ತೆರಳು” ಎಂದು ಗದರಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ, ಈ ಕುರಿತು ಸ್ಪಷ್ಟನೆ ನೀಡಿರುವ ಅಜಿತ್ ಪವಾರ್, “ನನಗೆ ಕಾನೂನು ಜಾರಿ ಪ್ರಾಧಿಕಾರಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವಿರಲಿಲ್ಲ” ಎಂದು ಹೇಳಿದ್ದಾರೆ.
ಎನ್ಸಿಪಿ ಮುಖ್ಯಸ್ಥರೂ ಆದ ಅಜಿತ್ ಪವಾರ್ ಅವರು ಸೋಲಾಪುರ್ ನ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಜನಾ ಕೃಷ್ಣ ಅವರಿಗೆ ಕರೆ ಮಾಡಿ ಗದರಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕುರ್ದು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಬಳಸಲಾಗುವ ‘ಮುರ್ರುಂ’ ಎಂಬ ವಸ್ತುವನ್ನು ಅಕ್ರಮವಾಗಿ ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಸೋಲಾಪುರ್ ನ ಕರ್ಮಲದ ಉಪ ಪೊಲೀಸ್ ಉಪ ವಿಭಾಗಾಧಿಕಾರಿಯಾದ ಅಂಜನಾ ಕೃಷ್ಣ ರಿಗೆ ಕರೆ ಮಾಡಿದ್ದ ಅಜಿತ್ ಪವಾರ್, “ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಸ್ಥಳದಿಂದ ತೆರಳು” ಎಂದು ಗದರಿದ್ದರು.
ಫೋನ್ ನಲ್ಲಿ ಮಾತನಾಡಿದ್ದ ಅಜಿತ್ ಪವಾರ್, “ನಾನು ಉಪ ಮುಖ್ಯಮಂತ್ರಿ, ತಕ್ಷಣವೇ ಕಾರ್ಯಾಚರಣೆ ನಿಲ್ಲಿಸಿ, ಅಲ್ಲಿಂದ ತೆರಳು”ಎಂದು ಅವರಿಗೆ ಸೂಚನೆ ನೀಡಿದ್ದರು. ಪವಾರ್ ಧ್ವನಿಯನ್ನು ಗುರುತಿಸದ ಕೇರಳ ಮೂಲದ ಐಪಿಎಸ್ ಅಧಿಕಾರಿಯಾದ ಅಂಜನಾ ಕೃಷ್ಣ, “ನನ್ನ ಮೊಬೈಲ್ ಗೆ ಕರೆ ಮಾಡಿ ಎಂದು ಹೇಳಿದ್ದರು.
“ನಾನು ಹೇಳಿದರೂ ನೀನು ಕೇಳುತ್ತಿಲ್ಲವಲ್ಲ? ನಿನಗೆಷ್ಟು ಧೈರ್ಯ? ನಿನ್ನ ನಂಬರ್ ಕೊಡು, ವೀಡಿಯೊ ಕರೆ ಮಾಡುವೆ” ಎಂದು ಪವಾರ್ ಗದರಿದ್ದರು. ನಂತರ, ಅಂಜನಾ ಕೃಷ್ಣರಿಗೆ ವೀಡಿಯೊ ಕರೆ ಮಾಡಿದ್ದ ಅಜಿತ್ ಪವಾರ್, ಅಲ್ಲಿಂದ ತೆರಳುವಂತೆ ಒತ್ತಾಯಿಸಿದ್ದರು.
ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆಯೆ, ಅಜಿತ್ ಪವಾರ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆದರಿಕೆ ಒಡ್ಡಿದ್ದಾರೆ ಹಾಗೂ ತಮ್ಮ ಪಕ್ಷದಲ್ಲಿನ ಕಳ್ಳರ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು.
ಈ ಘಟನೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಶುಕ್ರವಾರ ಮಧ್ಯಾಹ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಜಿತ್ ಪವಾರ್, “ನಾನು ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಹಾಗೂ ಪಾರದರ್ಶಕತೆಯನ್ನು ಖಾತರಿಗೊಳಿಸಬೇಕು ಎಂಬ ಬಗ್ಗೆ ಕಟಿಬದ್ಧವಾಗಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಸೋಲಾಪುರ್ ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಾನು ನಡೆಸಿದ ಮಾತುಕತೆಯ ಕೆಲವು ವೀಡಿಯೊಗಳು ನನ್ನ ಗಮನಕ್ಕೆ ಬಂದಿವೆ. ಆದರೆ, ಕಾನೂನು ಜಾರಿ ಪ್ರಾಧಿಕಾರಗಳ ಕೆಲಸದಲ್ಲಿ ಹಸ್ತಕ್ಷೇಪ ನಡೆಸುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಿಗೆ, ಸ್ಥಳದಲ್ಲಿನ ಪರಿಸ್ಥಿತಿ ಶಾಂತವಾಗುಳಿಯಬೇಕು ಹಾಗೂ ಮತ್ತಷ್ಟು ಪ್ರಕ್ಷುಬ್ಧವಾಗಬಾರದು” ಎಂಬುದಾಗಿತ್ತು ಎಂದು ತಿಳಿಸಿದ್ದಾರೆ.







