Maharashtra | ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 'ಪವರ್'ಗಾಗಿ ಒಂದಾದ ಪವಾರ್ ಪರಿವಾರ!

ಅಜಿತ್ ಪವಾರ್ ಮತ್ತು ಶರದ್ ಪವಾರ್ (File Photo: indiatoday.in)
ಮುಂಬೈ: ಮುಂಬರುವ ಪಿಂಪ್ರಿ-ಚಿಂಚ್ವಾಡ್ ನಗರ ಪಾಲಿಕೆ ಚುನಾವಣೆಗೆ ತಮ್ಮ ಸೋದರ ಮಾವ ಶರದ್ ಪವಾರ್ ರೊಂದಿಗೆ ಮೈತ್ರಿ ಪ್ರಕಟಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಆ ಮೂಲಕ ಪವಾರ್ ಪರಿವಾರದ ಮಹತ್ವದ ಒಗ್ಗೂಡುವಿಕೆಗೆ ಮುನ್ನುಡಿ ಬರೆದಿದ್ದಾರೆ.
ರವಿವಾರ ಪಿಂಪ್ರಿ-ಚಿಂಚ್ವಾಡ್ ನಗರ ಪಾಲಿಕೆ ಚುನಾವಣೆಗಾಗಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಜಿತ್ ಪವಾರ್, ಎನ್ಸಿಪಿಯ ಎರಡೂ ಬಣಗಳು ಒಗ್ಗೂಡಿದ್ದು, ನಮ್ಮ ಪರಿವಾರ (ಕುಟುಂಬ) ಒಟ್ಟಾಗಿದೆ ಎಂದು ಹೇಳಿದ್ದಾರೆ.
“ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ, ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಆ ಮೂಲಕ ಕುಟುಂಬವನ್ನು ಮತ್ತೆ ಒಂದಾಗಿಸುತ್ತಿದ್ದೇವೆ. ಈ ಬೆಳವಣಿಗೆಯಿಂದ ಹಲವು ಪ್ರಶ್ನೆಗಳೆದ್ದಿವೆ. ಆದರೆ, ಕೆಲವೊಮ್ಮೆ ಮಹಾರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ನಾನು ಸೀಟು ಹಂಚಿಕೆಯ ಕುರಿತು ಸ್ಥಳೀಯ ನಾಯಕರೊಂದಿಗೂ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು” ಎಂದು ಅವರು ಹೇಳಿದ್ದಾರೆ. ಈ ಒಗ್ಗೂಡುವಿಕೆಯ ಮೂಲಕ ಗಡಿಯಾರ ಮತ್ತು ತುತ್ತೂರಿ ಒಟ್ಟಾಗಿವೆ ಎಂದೂ ಅವರು ಹೇಳಿದ್ದಾರೆ.
ಶರದ್ ಪವಾರ್ ಬಣದ ತುತ್ತೂರಿ ಹಾಗೂ ಅಜಿತ್ ಪವಾರ್ ಬಣದ ಗಡಿಯಾರ ಚಿಹ್ನೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.
ಜನವರಿ 15ರಂದು ಪಿಂಪ್ರಿ-ಚಿಂಚ್ವಾಡ್ ಹಾಗೂ ಪುಣೆ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಮಹಾರಾಷ್ಟ್ರದಾದ್ಯಂತ ಒಟ್ಟು 29 ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ.





