ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತ್ಯು: ಸಿಐಡಿಯಿಂದ ತನಿಖೆ ಪ್ರಾರಂಭ

Photo Credit : ANI
ಬಾರಾಮತಿ: ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ ಬಾರಾಮತಿ ವಿಮಾನ ಅಪಘಾತದ ತನಿಖೆಯನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜನವರಿ 28ರಂದು ಸಂಭವಿಸಿದ ಅಪಘಾತದ ಬಳಿಕ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ದಾಖಲಾಗಿದ್ದ ಆಕಸ್ಮಿಕ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸುವಂತೆ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಪುಣೆ ಗ್ರಾಮೀಣ ಪೊಲೀಸರು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 194 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬೈನಿಂದ ಹೊರಟಿದ್ದ ಲಿಯರ್ಜೆಟ್–45 ವಿಮಾನವು ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ಟೇಬಲ್ಟಾಪ್ ಏರ್ಸ್ಟ್ರಿಪ್ ನ ಅಂಚಿನಿಂದ ಸುಮಾರು 200 ಮೀಟರ್ ದೂರದಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 66 ವರ್ಷದ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ 15,000 ಗಂಟೆಗಳ ಹಾರಾಟ ಅನುಭವ ಹೊಂದಿದ್ದ ಕ್ಯಾಪ್ಟನ್ ಸುಮಿತ್ ಕಪೂರ್, 1,500 ಗಂಟೆಗಳ ಹಾರಾಟ ಅನುಭವ ಹೊಂದಿದ್ದ ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್, ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್ ಹಾಗೂ ಗಗನಸಖಿ ಪಿಂಕಿ ಮಾಲಿ ಮೃತಪಟ್ಟಿದ್ದಾರೆ.
ಸಿಐಡಿ ತಂಡವು ತನಿಖಾ ಕಾರ್ಯವನ್ನು ಆರಂಭಿಸಿದ್ದು, ಪುಣೆ ಗ್ರಾಮೀಣ ಪೊಲೀಸರಿಂದ ಅಪಘಾತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲಿದೆ. ಅಲ್ಲದೆ, ಬಾರಾಮತಿ ವಾಯುನೆಲೆಯ ಸಮೀಪದ ಅಪಘಾತ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಿಂದ ಬಾರಾಮತಿಗೆ ಪ್ರಯಾಣ ಆರಂಭಿಸುವ ಮೊದಲು ವಿಮಾನದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆದಿತ್ತೇ ಎಂಬ ಅಂಶವನ್ನೂ ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಮಾನ ಅಪಘಾತ ತನಿಖಾ ಬ್ಯೂರೋ ಕೂಡ ಅಪಘಾತದ ಕುರಿತು ಪ್ರತ್ಯೇಕ ಔಪಚಾರಿಕ ತನಿಖೆಯನ್ನು ಆರಂಭಿಸಿದೆ.







