ಭೀಮಾ ಕೋರೆಗಾಂವ್ ಯುದ್ಧದ ವರ್ಷಾಚರಣೆ ಗೌರವ ನಮನ ಸಲ್ಲಿಸಿದ ಅಜಿತ್ ಪವಾರ್, ಪ್ರಕಾಶ್ ಅಂಬೇಡ್ಕರ್
PhotoCredit: X/@Prksh_Ambedkar
ಪುಣೆ: ಕೋರೆಗಾಂವ್ ಭೀಮಾ ಯುದ್ಧದ 206ನೇ ವರ್ಷಾಚರಣೆಯ ದಿನವಾದ ಸೋಮವಾರ ಇಲ್ಲಿನ ‘ಜಯ ಸ್ತಂಭ’ದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಯಕರು ಗೌರವ ನಮನ ಸಲ್ಲಿಸಿದರು.
ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿ ಹಾಗೂ ಮರಾಠಾ ಒಕ್ಕೂಟದ ಪೇಶ್ವೆ ಬಣದ ನಡುವೆ 1818 ಜನವರಿ 1ರಂದು ನಡೆದ ಯುದ್ಧದ ವರ್ಷಾಚರಣೆಯ ದಿನ ಗೌರವ ನಮನ ಸಲ್ಲಿಸಲು ಈ ‘ಜಯ ಸ್ತಂಭ’ದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಸೇರುತ್ತಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್ ಅವರು ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಚತ್ತೀಸ್ ಗಢದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿರುವುದನ್ನು ಉಲ್ಲೇಖಿಸಿದರು ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಇಲ್ಲ ಎಂದರು.
‘‘ಮೋದಿ ಅವರ ಆಡಳಿತದಲ್ಲಿ ದೇಶದ ಹೆಸರು, ಖ್ಯಾತಿ, ಗೌರವ ಹೆಚ್ಚಿದೆ’’ ಎಂದು ಅವರು ಹೇಳಿದರು.
‘‘ಭೀಮಾ ಕೋರೆಗಾಂವ್ ವರ್ಷಾಚರಣೆಯ ದಿನ ಗೌರವ ನಮನ ಸಲ್ಲಿಸಲು ಇಲ್ಲಿಗೆ ಆಗಮಿಸುವ ಜನರಿಗೆ ಪೊಲೀಸರು, ಸ್ಥಳೀಯ ಆಡಳಿತ ಸೇರಿದಂತೆ ಎಲ್ಲಾ ಇಲಾಖೆಗಳು ಉತ್ತಮ ವ್ಯವಸ್ಥೆ ಮಾಡಿದೆ. ಆದುದರಿಂದ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ’’ ಎಂದು ಅವರು ಹೇಳಿದರು.
ಜಯ ಸ್ತಂಭಕ್ಕೆ ಗೌರವ ನಮನ ಸಲ್ಲಿಸಿದವರಲ್ಲಿ ವಂಚಿತ ಬಹುಜನ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್ ಹಾಗೂ ಎನ್ಸಿಪಿಯ ಶಿರೂರು (ಪುಣೆ ಜಿಲ್ಲೆ) ಸಂಸದ ಅಮೋಲ್ ಕೊಲ್ಹೆ ಸೇರಿದ್ದಾರೆ.