ಮಹಾರಾಷ್ಟ್ರ ಡಿಸಿಎಂ ಅಜಿತ್-ಐಪಿಎಸ್ ಅಧಿಕಾರಿ ನಡುವೆ ಮಾತಿನ ಚಕಮಕಿ

Screengrab:X/@KhaneAnkita
ಮುಂಬೈ: ಅಕ್ರಮವಾಗಿ ಮಣ್ಣು ಅಗೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ದೂರವಾಣಿ ಕರೆಯ ಮೂಲಕ ನಡೆದ ಈ ಮಾತಿನ ಚಕಮಕಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸೋಲಾಪುರ ಜಿಲ್ಲೆಯ ಕುರ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಕ್ರಮವಾಗಿ ಮಣ್ಣು ಅಗೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣರೊಂದಿಗೆ ಫೋನ್ ನಲ್ಲಿ ಮಾತನಾಡಿದ ಅಜಿತ್ ಪವಾರ್, “ನಾನು ಉಪ ಮುಖ್ಯಮಂತ್ರಿ, ತಕ್ಷಣವೇ ಕಾರ್ಯಾಚರಣೆ ನಿಲ್ಲಿಸಿ, ಅಲ್ಲಿಂದ ತೆರಳು” ಎಂದು ಅವರಿಗೆ ಸೂಚನೆ ನೀಡಿದ್ದಾರೆ. ಪವಾರ್ ಧ್ವನಿಯನ್ನು ಗುರುತಿಸದ ಅಂಜನಾ ಕೃಷ್ಣ, “ನನ್ನ ಮೊಬೈಲ್ ಗೆ ಕರೆ ಮಾಡಿ” ಎಂದು ಹೇಳಿದ್ದಾರೆ.
“ನಾನು ಹೇಳಿದರೂ ನೀನು ಕೇಳುತ್ತಿಲ್ಲವಲ್ಲ? ನಿನಗೆಷ್ಟು ಧೈರ್ಯ? ನಿನ್ನ ನಂಬರ್ ಕೊಡು, ವಿಡಿಯೊ ಕರೆ ಮಾಡುವೆ” ಎಂದು ಪವಾರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ, ಅಂಜನಾ ಕೃಷ್ಣರಿಗೆ ವಿಡಿಯೊ ಕರೆ ಮಾಡಿರುವ ಅಜಿತ್ ಪವಾರ್, ಅಲ್ಲಿಂದ ತೆರಳುವಂತೆ ಹೇಳಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಎನ್ಸಿಪಿ ಸಂಸದ ಸುನಿಲ್ ತಟ್ಕರೆ, “ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ. ಅಜಿತ್ ಪವಾರ್ ಅವರ ಉದ್ದೇಶ ಅಧಿಕಾರಿಯ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿರಲಿಲ್ಲ; ಬದಲಿಗೆ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಅಧಿಕಾರಿಯೊಂದಿಗೆ ಕಠಿಣವಾಗಿ ಮಾತನಾಡಿರಬಹುದು” ಎಂದು ಸ್ಪಷ್ಟನೆ ನೀಡಿದ್ದಾರೆ.
करमाळ्याच्या पोलिस उपअधिक्षक अंजली कृष्णा यांना उपमुख्यमंत्री अजित पवारांना फोनवरुन ओळखता आले नाही.
— Ankita Shantinath Khane (@KhaneAnkita) September 2, 2025
त्यानंतर रागावलेल्या अजित पवारांनी अंजली कृष्णा यांना खडेबोल सुनावत थेट व्हिडीओ काॅलच केला.#ajitpawar #AnjaliKrishna pic.twitter.com/ag2DNuf3do







