ಮಹಾರಾಷ್ಟ್ರ | ಮತ ನೀಡಿದರಷ್ಟೇ ಅನುದಾನದ ಬೆದರಿಕೆ ಹಾಕಿದ ಅಜಿತ್ ಪವಾರ್: ಕ್ರಮಕ್ಕೆ ಆಗ್ರಹಿಸಿದ ಎನ್ಸಿಪಿ ಶರದ್ ಬಣ

ಸುಪ್ರಿಯಾ ಸುಳೆ | PC : PTI
ನಾಗ್ಪುರ: ಮತದಾರರ ಬೆಂಬಲಕ್ಕಾಗಿ ಅಭಿವೃದ್ಧಿ ಅನುದಾನಗಳನ್ನು ಸಂಪರ್ಕಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಂತಹವರ ಹೇಳಿಕೆಯ ಮೇಲೆ ಚುನಾವಣಾ ಆಯೋಗ ನಿಗಾವಹಿಸಬೇಕು ಎಂದು ಎನ್ಸಿಪಿ (ಶರದ್ ಬಣ) ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಪ್ರಿಯಾ ಸುಳೆ, “ಇಂತಹ ಹೇಳಿಕೆಗಳ ಮೇಲೆ ನಿಗಾವಹಿಸುವುದು ಒಂದು ಬಲಿಷ್ಠ ಪ್ರಜಾತಂತ್ರದಲ್ಲಿ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹದ್ದು ಆಗುತ್ತಿರುವುದನ್ನು ನಾವು ಕಾಣುತ್ತಿಲ್ಲ. ನಾನೇ ನನ್ನ ಪ್ರಕರಣವೊಂದರಲ್ಲಿ ಚುನಾವಣಾ ಆಯೋಗದಲ್ಲಿ ಹೋರಾಟ ನಡೆಸಿದ್ದೆ. ಆದರೆ, ಎಲ್ಲ ದಾಖಲೆಗಳಿದ್ದರೂ ನಮಗೆ ನ್ಯಾಯ ದೊರೆಯಲಿಲ್ಲ” ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎನ್ಸಿಪಿ (ಶರದ್ ಬಣ)ದ ವಕ್ತಾರ ಮಹೇಶ್ ತಾಪಸೆ, ಈ ಹೇಳಿಕೆಗಾಗಿ ಅಜಿತ್ ಪವಾರ್ ಸಾರ್ವಜನಿಕ ಕ್ಷಮೆ ಕೋರಬೇಕು ಎಂದೂ ಒತ್ತಾಯಿಸಿದ್ದಾರೆ.
ಶುಕ್ರವಾರ ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯತ್ ಗೆ ನಡೆಯುತ್ತಿರುವ ಚುನಾವಣೆಯ ಭಾಗವಾಗಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅಜಿತ್ ಪವಾರ್, ಒಂದು ವೇಳೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಾತರಿಗೊಳಿಸಿದರೆ, ನಗರದ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಅದೇ ಒಂದು ವೇಳೆ ನಮ್ಮನ್ನು ತಿರಸ್ಕರಿಸಿದರೆ, ನಾನೂ ಕೂಡಾ ನಿಮ್ಮನ್ನು ತಿರಸ್ಕರಿಸುತ್ತೇನೆ ಎಂದು ಮತದಾರರಿಗೆ ಬೆದರಿಕೆ ಒಡ್ಡಿದ್ದರು. ಇದು ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.







