ಮಹಾರಾಷ್ಟ್ರ |ಅನರ್ಹತೆಯಿಂದ ಪಾರಾಗಲು ಅಜಿತ್ ಬಣಕ್ಕೆ ಬೇಕಿದೆ 36 ಶಾಸಕರ ಬಲ!

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ದೇಶದ ಅಭಿವೃದ್ಧಿಗಾಗಿ ಏಕನಾಥ್ ಶಿಂಧೆ ಸರ್ಕಾರದ ಜೊತೆ ಸೇರಿಕೊಳ್ಳಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಆದರೆ, ಅಜಿತ್ ಪವಾರ್ ಪಕ್ಷಾಂತರ ನಿಷೇಧ ಕಾನೂನಿನಿಂದ ಪಾರಾಗಲು ಎನ್ಸಿಪಿಯ 53 ಶಾಸಕರ ಪೈಕಿ ಕನಿಷ್ಠ 36 ಶಾಸಕರನ್ನು ತನ್ನೊಂದಿಗೆ ಒಯ್ಯವ ಅಗತ್ಯವಿದೆ.
ಸಂವಿಧಾನದ 10ನೇ ಅನುಸೂಚಿಯಡಿ ಎನ್ಸಿಪಿ ಈಗಲೂ ಎಲ್ಲ ಬಂಡುಕೋರ ಶಾಸಕರ ಅನರ್ಹತೆಗೆ ಕ್ರಮ ಕೈಗೊಳ್ಳಬಹುದು. ಅಜಿತ ಪವಾರ್ ತನ್ನದೇ ಅಸಲಿ ಎನ್ಸಿಪಿ ಎಂದು ಚುನಾವಣಾ ಆಯೋಗದ ಎದುರು ಸಾಬೀತು ಮಾಡುವವರೆಗೂ ಅವರ ಮತ್ತು ಬೆಂಬಲಿಗ ಶಾಸಕರ ತಲೆಯ ಮೇಲೆ ಅನರ್ಹತೆಯ ಕತ್ತಿ ತೂಗಾಡುತ್ತಲೇ ಇರುತ್ತದೆ.
ಅಜಿತ ಪವಾರ್ ಸಭೆಯ ಬಗ್ಗೆ ನನಗೆ ತಿಳಿದಿಲ್ಲ: ಶರದ್ ಪವಾರ್
ರವಿವಾರ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸುವ ಮುನ್ನ ಛಗನ್ ಭುಜಬಲ್ ಸೇರಿದಂತೆ ಎನ್ಸಿಪಿಯ ಹಿರಿಯ ನಾಯಕರು ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಎನ್ಸಿಪಿಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅವರೂ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪುಣೆಯಲ್ಲಿದ್ದ ಶರದ ಪವಾರ್, ತನಗೆ ಸಭೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.





