ನಾವು ಹಾಳಾದೆವು, ಹಿಂಜೆವಾಡಿ ಐಟಿ ಪಾರ್ಕ್ ಮಹಾರಾಷ್ಟ್ರದಿಂದ ಹೊರಹೋಗುತ್ತಿದೆ: ಅಜಿತ್ ಪವಾರ್ ಆಕ್ರೋಶ

ಅಜಿತ ಪವಾರ್ | PTI
ಪುಣೆ,ಜು.26: ಪುಣೆಯಲ್ಲಿಯ ಹಿಂಜೆವಾಡಿ ಐಟಿ ಪಾರ್ಕ್ ಬೆಂಗಳೂರು ಮತ್ತು ಹೈದರಾಬಾದ್ ಗೆ ಸ್ಥಳಾಂತರಗೊಳ್ಳುತ್ತಿದೆ ಎಂದು ಬಹಿರಂಗಗೊಳಿಸುವ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಕೋಲಾಹಲವನ್ನು ಸೃಷ್ಟಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶುಕ್ರವಾರ ಇಲ್ಲಿಯ ಪಿಂಪರಿ-ಚಿಂಚವಡದಲ್ಲಿ ಸ್ಥಳೀಯ ಸಂಸ್ಥೆಯ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದಾಗ ಪವಾರ್ ಕೋಪದಿಂದ ಆಕ್ರೋಶ ವ್ಯಕ್ತಪಡಿಸಿದ ವೀಡಿಯೊ ವೈರಲ್ ಆಗಿದೆ.
‘ನಾವು ಹಾಳಾದೆವು. ಹಿಂಜೆವಾಡಿಯ ಇಡೀ ಐಟಿ ಪಾರ್ಕ್ ಬೆಂಗಳೂರು ಮತ್ತು ಹೈದರಾಬಾದ್ ಗೆ ಸ್ಥಳಾಂತರಗೊಳ್ಳುತ್ತಿದೆ. ನಿಮಗೆ ಸ್ವಲ್ಪವೂ ಕಾಳಜಿಯಿಲ್ಲವೇ?’ಎಂದು ಸ್ಥಳೀಯ ಸರಪಂಚ ಗಣೇಶ ಜಾಂಭುಲ್ಕರ್ ಅವರನ್ನು ಪವಾರ್ ಪ್ರಶ್ನಿಸಿದರು.
ಪ್ರದೇಶವು ಜಲಾವೃತಗೊಳ್ಳುವ ಮತ್ತು ಇತರ ಸಮಸ್ಯೆಗಳನ್ನು ಪರಿಶೀಲಿಸಲು ಬೆಳಿಗ್ಗೆ ಆರು ಗಂಟೆಗೇ ಹಿಂಜೆವಾಡಿ ತಲುಪಿದ್ದ ಪವಾರ್ ಪಿಂಪರಿ-ಚಿಂಚವಾಡದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಪವಾರ್ ಪ್ರದೇಶವನ್ನು ಪರಿಶೀಲಿಸುತ್ತಿದ್ದಾಗ ಜಾಂಬುಲ್ಕರ್ ಮಾಧ್ಯಮಗಳ ಉಪಸ್ಥಿತಿಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಅವರಲ್ಲಿ ದೂರಿಕೊಂಡಿದ್ದರು.
ಅಣೆಕಟ್ಟುಗಳನ್ನು ನಿರ್ಮಿಸಿದಾಗ ದೇವಸ್ಥಾನಗಳು ಸ್ಥಳಾಂತರಗೊಳ್ಳುತ್ತವೆ. ನೀವು ಏನು ಬೇಕಾದರೂ ಹೇಳಬಹುದು, ನಾನು ಕೇಳುತ್ತೇನೆ. ಆದರೆ ನನಗೆ ಏನು ಬೇಕೋ ಅದನ್ನು ಮಾಡುತ್ತೇನೆ. ನಾವು ಹಾಳಾಗಿದ್ದೇವೆ,ಇಡೀ ಹಿಂಜೆವಾಡಿ ಐಟಿ ಪಾರ್ಕ್ ಮಹಾರಾಷ್ಟ್ರದಿಂದ ಹೊರಹೋಗುತ್ತಿದೆ. ನಿಮಗೆ ಸ್ವಲ್ಪವೂ ಕಾಳಜಿಯಿಲ್ಲ. ನಾನು ಬೆಳಿಗ್ಗೆ ಆರು ಗಂಟೆಗೇ ಇಲ್ಲಿ ಪರಿಶೀಲನೆಗೇಕೆ ಬರುತ್ತೇನೆ? ನನಗೆ ಅರ್ಥವಾಗುತ್ತಿಲ್ಲ. ಕಠಿಣ ಕ್ರಮವನ್ನು ತೆಗೆದುಕೊಳ್ಳದ ಹೊರತು ಬೇರೆ ಪರ್ಯಾಯವಿಲ್ಲ’ ಎಂದು ಮಾಧ್ಯಮಗಳಿಗೆ ತಮ್ಮ ಕ್ಯಾಮೆರಾಗಳನ್ನು ಆಫ್ ಮಾಡುವಂತೆ ಸೂಚಿಸುತ್ತ ಪವಾರ್ ಕಿಡಿಕಾರಿದರು.
ಹಿಂಜೆವಾಡಿಯಲ್ಲಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವು 2,800 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಿಸಿರುವ ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್ನ್ನು ಒಳಗೊಂಡಿದ್ದು, ಇಲ್ಲಿ 800ಕ್ಕೂ ಹೆಚ್ಚಿನ ಕಂಪನಿಗಳು ತಮ್ಮ ಕಚೇರಿಗಳನ್ನು ಹೊಂದಿವೆ.







