ಹಳೆಯ ಕಟ್ಟಡಗಳಿಂದ ಅಪಾಯ: ಹೊಣೆಗಾರಿಕೆಯಿಂದ ನುಣುಚಿಕೊಂಡ ಅಜ್ಮೀರ್ ದರ್ಗಾದ ನೋಟಿಸ್ಗೆ ಮುಸ್ಲಿಮ್ ಗುಂಪುಗಳ ಆಕ್ರೋಶ

PC : timesofindia.indiatimes.com
ಅಜ್ಮೀರ್: ದರ್ಗಾದ ಸಂಕೀರ್ಣದಲ್ಲಿರುವ ಶಿಥಿಲಗೊಂಡ ಹಳೆಯ ಕಟ್ಟಡಗಳಿಂದ ಉಂಟಾಗುವ ಯಾವುದೇ ಅವಘಡಗಳಿಗೆ ಆಡಳಿತ ಮಂಡಳಿಯು ಜವಾಬ್ದಾರವಾಗುವುದಿಲ್ಲ ಎಂದು ಅಜ್ಮೀರ್ ದರ್ಗಾದ ನಾಝಿಮ್(ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಬಿಲಾಲ್ ಖಾನ್ ಅವರು ಹೊರಡಿಸಿರುವ ಬಹಿರಂಗ ನೋಟಿಸ್ ಮುಸ್ಲಿಮ್ ಸಂಘಟನೆಗಳು ಮತ್ತು ಸಮುದಾಯದ ಧಾರ್ಮಿಕ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರೀ ಮಳೆಯ ಸಂದರ್ಭಗಳಲ್ಲಿ ಕುಸಿಯಬಹುದಾದ ಹಳೆಯ ಮತ್ತು ಶಿಥಿಲ ಕಟ್ಟಡಗಳಿಂದ ದೂರವಿರುವಂತೆ ದರ್ಗಾದ ಆವರಣದಲ್ಲಿ ಜು.21ರಂದು ಅಂಟಿಸಲಾಗಿರುವ ನೋಟಿಸ್ನಲ್ಲಿ ಶ್ರದ್ಧಾಳುಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಯಾವುದೇ ಅವಘಡ ಅಥವಾ ಅಹಿತಕರ ಘಟನೆ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ವ್ಯಕ್ತಿಯದ್ದೇ ಆಗಿರುತ್ತದೆ. ನಾಝಿಮ್ ಕಚೇರಿಯು ಯಾವುದೇ ಕಾನೂನಾತ್ಮಕ ಉತ್ತರದಾಯಿತ್ವವನ್ನು ಹೊಂದಿರುವುದಿಲ್ಲ ಎಂದೂ ನೋಟಿಸ್ನಲ್ಲಿ ತಿಳಿಸಲಾಗಿದೆ.
ಜಮೀಯತ್ ಉಲಮಾ-ಎ-ಹಿಂದ್,ಅಖಿಲ ಭಾರತ ಮುಸ್ಲಿಮ್ ಮಂಡಳಿ ಮತ್ತು ಮುಸ್ಲಿಮ್ ಪ್ರೊಗ್ರೆಸಿವ್ ಫ್ರಂಟ್(ರಾಜಸ್ಥಾನ) ಸೇರಿದಂತೆ ದಿಲ್ಲಿಯಿಂದ ಹೈದರಾಬಾದ್ವರೆಗಿನ ವಿವಿಧ ಸಂಘಟನೆಗಳು ನೋಟಿಸಿನ ಭಾಷೆ ಮತ್ತು ಧಾಟಿಯನ್ನು ಖಂಡಿಸಿವೆ. ನೋಟಿಸನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿರುವ ಹಲವಾರು ಗುಂಪುಗಳು ಈ ವಿಷಯದಲ್ಲಿ ತನಿಖೆಯನ್ನು ನಡೆಸುವಂತೆ ಅಲ್ಪಸಂಖ್ಯಾತರ ಸಚಿವಾಲಯಕ್ಕೆ ಕರೆ ನೀಡಿವೆ.
ಅಜ್ಮೀರ್ ದರ್ಗಾ ಸಮಿತಿಯು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದ್ದು,ಈ ಘಟನೆಯು ಭಾರತದ ಪ್ರಮುಖ ಧಾರ್ಮಿಕ ಪರಂಪರೆ ತಾಣಗಳ ನಿರ್ವಹಣೆಯಲ್ಲಿ ಹೆಚ್ಚಿನ ಉತ್ತರದಾಯಿತ್ವ,ಪಾರದರ್ಶಕತೆ ಮತ್ತು ವೃತ್ತಿಪರ ಮೇಲ್ವಿಚಾರಣೆಗಾಗಿ ಕರೆಗಳಿಗೆ ಮರುಜೀವ ನೀಡಿದೆ.
ಮುಂಬೈನ ಹಾಜಿ ಅಲಿ ಮತ್ತು ಮಾಹಿಮ್ ದರ್ಗಾದ ವ್ಯವಸ್ಥಾಪಕ ಟ್ರಸ್ಟಿ, ಪ್ರಸ್ತುತ ಹಾಜಿ ಅಲಿ ದರ್ಗಾದಲ್ಲಿ ನವೀಕರಣ ಕಾಮಗಾರಿಗಳ ಮೇಲ್ವಿಚಾರಣೆ ವಹಿಸಿರುವ ಸುಹೈಲ್ ಖಂಡ್ವಾನಿಯವರು ದಿಗ್ಭ್ರಮೆಯನ್ನು ವ್ಯಕ್ತಪಡಿಸಿದ್ದು, ನೋಟಿಸಿನ ಕುರಿತು ತನಗೆ ಮಾಹಿತಿ ಲಭಿಸಿದೆ. ಯಾವ ಕಟ್ಟಡ ಸುರಕ್ಷಿತವಲ್ಲ ಎನ್ನುವುದನ್ನೂ ನಾಝಿಮ್ ಗುರುತಿಸಿಲ್ಲ ಮತ್ತು ಯಾವುದೇ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ ಎಂದು ತಿಳಿದು ತನಗೆ ಆಘಾತವಾಗಿದೆ. ಕೇವಲ ನೋಟಿಸ್ ಹೊರಡಿಸುವುದು ಶ್ರದ್ಧಾಳುಗಳಲ್ಲಿ ಭೀತಿಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಅಜ್ಮೀರ್ ದರ್ಗಾಕ್ಕೆ 20,000 ಜನರು ಭೇಟಿ ನೀಡುತ್ತಾರೆ ಹಾಗೂ ಗುರುವಾರ ಮತ್ತು ಶುಕ್ರವಾರಗಳಲ್ಲಿ ಈ ಸಂಖ್ಯೆ ಒಂದು ಲಕ್ಷಕ್ಕೆ ಏರುತ್ತದೆ.
ಈ ನೋಟಿಸ್ ನಾಚಿಕೆಗೇಡಿನ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಸಂಕೇತವಾಗಿದೆ ಎಂದು ಹೇಳಿರುವ ದಿಲ್ಲಿಯ ಹಝರತ್ ನಿಝಾಮುದ್ದೀನ್ ಔಲಿಯಾ ದರ್ಗಾದ ಮುಖ್ಯ ಉಸ್ತುವಾರಿ ಸೈಯದ್ ನದೀಂ ಹಸನ್ ನಿಜಾಮಿ ಅವರು, ‘ಸಂಕೀರ್ಣವನ್ನು ಸಮೀಕ್ಷೆ ಮಾಡಿ ದುರ್ಬಲ ಕಟ್ಟಡಗಳನ್ನು ಗುರುತಿಸುವಂತೆ ಮತ್ತು ನಂತರ ಝಿಯಾರತ್(ದರ್ಗಾಕ್ಕೆ ಭೇಟಿ) ಅನ್ನು ಮುಂದುವರಿಸಬೇಕೇ ಎನ್ನುವುದನ್ನು ನಿರ್ಧರಿಸುವಂತೆ ಶ್ರದ್ಧಾಳುಗಳಿಗೆ ಸೂಚಿಸಿರುವುದು ಅಸಂಬದ್ಧವಾಗಿದೆ. ಹಾಗಾದರೆ ದರ್ಗಾ ನಾಝಿಮರ ನಿಖರವಾದ ಕೆಲಸವೇನು? ಅವರು ರಾಜೀನಾಮೆ ನೀಡಬೇಕು. ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿ ಅನುಭವ ಹೊಂದಿರುವ ಅರ್ಹ ವೃತ್ತಿಪರರನ್ನು ನೇಮಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ ’ ಎಂದು ಹೇಳಿದ್ದಾರೆ.
ಕಳೆದ ವಾರ ದರ್ಗಾ ಸಂಕೀರ್ಣದಲ್ಲಿಯ ಕನಿಷ್ಠ ಮೂರು ಮಸೀದಿಗಳಲ್ಲಿ ಛಾವಣಿ ಕುಸಿತ ಮತ್ತು ನೀರು ಸೋರಿಕೆ ಘಟನೆಗಳ ಹಿನ್ನೆಲೆಯಲ್ಲಿ ಈ ನೋಟಿಸನ್ನು ಹೊರಡಿಸಲಾಗಿದೆ.







