ಅಮೋಘ ಬೌಲಿಂಗ್ ಪ್ರದರ್ಶನದ ಶ್ರೇಯವನ್ನು ಕ್ಯಾನ್ಸರ್ ಪೀಡಿತ ಸಹೋದರಿಗೆ ಅರ್ಪಿಸಿದ ಆಕಾಶ್ ದೀಪ್

ಆಕಾಶ್ ದೀಪ್ | PC : PTI
ಎಜ್ಬಾಸ್ಟನ್: ಎಜ್ಬಾಸ್ಟನ್ ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ, ಭಾರತ ತಂಡದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ ಭಾರತ ತಂಡದ ವೇಗಿ ಆಕಾಶ್ ದೀಪ್, ತಮ್ಮ ಅಮೋಘ ಬೌಲಿಂಗ್ ಪ್ರದರ್ಶನದ ಶ್ರೇಯವನ್ನು ತಮ್ಮ ಕ್ಯಾನ್ಸರ್ ಪೀಡಿತ ಸಹೋದರಿಗೆ ಅರ್ಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪಂದ್ಯದ ನಂತರ, ಭಾರತ ತಂಡದ ಮಾಜಿ ಬ್ಯಾಟರ್ ಚೇತೇಶ್ವರ್ ಪೂಜಾರರೊಂದಿಗೆ ಮಾತನಾಡಿದ ಆಕಾಶ್ ದೀಪ್, “ನಾನು ಪ್ರತಿ ಬಾರಿ ಕೈಯಲ್ಲಿ ಚೆಂಡು ಹಿಡಿದಾಗಲೂ ಅವಳದೇ ನೆನಪು ಹಾಗೂ ಚಿತ್ರಗಳು ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿದ್ದವು. ಹೀಗಾಗಿ, ಈ ಪ್ರದರ್ಶನದ ಶ್ರೇಯಸ್ಸನ್ನು ಆಕೆಗೇ ಅರ್ಪಿಸುತ್ತೇನೆ” ಎಂದು ಭಾವುಕವಾಗಿ ಹೇಳಿದ್ದಾರೆ.
“ನಾನು ಈ ಕುರಿತು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ, ನನ್ನ ಪ್ರದರ್ಶನದಿಂದ ಆಕೆ ಖುಷಿಗೊಳ್ಳಲಿದ್ದು, ತುಂಬಾ ಸಂತೋಷ ಪಡುತ್ತಾಳೆ” ಎಂದು ಗದ್ಗದಿತರಾಗಿ ತಿಳಿಸಿದ್ದಾರೆ.
ಈ ವೇಳೆ, ತಮ್ಮ ಗಂಟಲು ಬಿಗಿದು, ಕಣ್ಣಾಲಿಗಳು ತುಂಬಿಕೊಂಡರೂ, ಹಸನ್ಮುಖರಾಗಿಯೇ ಮಾತನಾಡಿದ ಆಕಾಶ್ ದೀಪ್, “ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂದು ಹೇಳಲು ಬಯಸುತ್ತೇನೆ” ಎಂದು ಹೇಳುವ ಮೂಲಕ, ತನ್ನ ಸಹೋದರಿಗೆ ಧೈರ್ಯ ತುಂಬಿದರು.
ಬುಮ್ರಾ ಅನುಪಸ್ಥಿತಿಯಲ್ಲಿ ಆಕಾಶ್ ಮಿಂಚು!
ಪರಿಣತ ವೇಗಿ ಜಸ್ಪ್ರೀತ್ ಬುಮ್ರಾರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಆಕಾಶ್ ದೀಪ್, ಅದನ್ನು ಸದುಪಯೋಗ ಪಡಿಸಿಕೊಂಡರಲ್ಲದೆ, ಭಾರತ ತಂಡದ ಬೌಲಿಂಗ್ ಗೆ ಬಲವನ್ನೂ ತುಂಬಿದರು. ಪ್ರಥಮ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಬುಮ್ರಾ ಇದ್ದೂ, ಸೋಲಿನ ಕಹಿ ಉಂಡಿದ್ದ ಭಾರತ ತಂಡಕ್ಕೆ, ಆಕಾಶ್ ದೀಪ್ ಎರಡನೆ ಪಂದ್ಯದಲ್ಲಿ ಗೆಲುವಿನ ಸಿಹಿ ಉಣಿಸಿದರು.
ಪ್ರಥಮ ಇನಿಂಗ್ಸ್ ನಲ್ಲಿ 88 ರನ್ ನೀಡಿ 4 ವಿಕೆಟ್ ಪಡೆದಿದ್ದ ಆಕಾಶ್ ದೀಪ್, ಎರಡನೆ ಇನಿಂಗ್ಸ್ ನಲ್ಲಿ 99 ರನ್ ನೀಡಿ, ಪ್ರಮುಖ ಆರು ವಿಕೆಟ್ ಗಳನ್ನು ಕಬಳಿಸಿ, ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.







