ಉತ್ತರ ಪ್ರದೇಶ | ಲೋಕಸಭಾ ಚುನಾವಣೆಯಲ್ಲಿ ಎಸ್ಪಿ, ‘ಇಂಡಿಯಾ’ ಗೆದ್ದ ಕ್ಷೇತ್ರಗಳ 50 ಸಾವಿರಕ್ಕೂ ಅಧಿಕ ಮತದಾರರನ್ನು ಕೈಬಿಡಲು ಬಿಜೆಪಿ-ಚುನಾವಣಾ ಆಯೋಗ ಸಂಚು: ಅಖಿಲೇಶ್ ಗಂಭೀರ ಆರೋಪ

ಅಖಿಲೇಶ್ ಯಾದವ್ |Photo Credit : PTI
ಲಕ್ನೋ,ನ.22: ಉತ್ತರಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟವು ಬಲವಾದ ಸಾಧನೆ ಮಾಡಿದ್ದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ 50 ಸಾವಿರ ಮತದಾರರನ್ನು ಮತದಾರಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಸರಕಾರ ಹಾಗೂ ಚುನಾವಣಾ ಆಯೋಗವು ಸಂಚುಹೂಡಿದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಶನಿವಾರ ಆಪಾದಿಸಿದ್ದಾರೆ.
ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಮೆ (ಎಸ್ಐಆರ್) ನಡೆಯುತ್ತಿರುವ ನಡುವೆ ಅಖಿಲೇಶ್ ಅವರು ಈ ಆರೋಪ ಮಾಡಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ತನ್ನ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ‘‘ ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಯು ಚುನಾವಣಾ ಆಯೋಗದ ಜೊತೆ ಶಾಮೀಲಾಗಿ ಮತದಾರರ ಹೆಸರುಗಳನ್ನು ಅಳಿಸಿಹಾಕಲು ದೊಡ್ಡ ಮಟ್ಟದ ಸಿದ್ಧತೆಗಳನ್ನು ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರೆತಿದೆ’’ ಎಂದವರು ಹೇಳಿದ್ದಾರೆ.
ವಿವಾಹದ ಋತುವಿನಲ್ಲಿ ಎಸ್ಐಆರ್ ನಡೆಸಕೂಡದೆಂದು ಆಗ್ರಹಿಸಿದ ಅವರು ಉತ್ತರಪ್ರದೇಶದ ಮತದಾರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಗೆ ಕಾಲಾಮಿತಿಯನ್ನು ಚುನಾವಣಾ ಆಯೋಗವು ವಿಸ್ತರಿಸಬೇಕೆಂದು ಅವರು ಆಗ್ರಹಿಸಿದರು.
2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 225 ಸ್ಛಾನಗಳನ್ನು ಗೆದ್ದಿತ್ತು. ಆದರೆ 2024ರ ಲೋಕಸಭಾ ಚುನಾವಣೆಯ ವೇಳೆಗೆ ಪಕ್ಷವು ಕೇವಲ 162 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಹೊಂದಿತ್ತು. ಆದರೆ 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 111 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯಗಳಿಸಿದ್ದು, 183 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.
2022ರ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಎರಡರಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಗಳಿಸಿತ್ತು ಎಂದವರು ಹೇಳಿದರು.
2024ರ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಹಾಗೂ ಚುನಾವಣಾ ಆಯೋಗವು ಪ್ರಾಥಮಿಕವಾಗಿ ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳದ ಬಗ್ಗೆ ಗಮನಹರಿಸಿದೆ ಎಂದರು.
ಮತದಾರ ಪಟ್ಟಿಯನ್ನು ವಿವೇಕಯುತವಾಗಿ ದೃಢಿೀಕರಿಸುವಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗುವುದು, ಅರ್ಹ ಮತದಾರರನ್ನು ದೃಢೀಕರಿಸುವುದು ಹಾಗೂ ಯಾವುದೇ ಅಕ್ರಮಗಳು ನಡೆದಲ್ಲಿ ತಕ್ಷಣವೇ ಪಕ್ಷದ ಮುಖ್ಯ ಕಚೇರಿಗೆ ಮಾಹಿತಿ ನೀಡಬೇಕೆಂದು ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಸ್ವಕ್ಷೇತ್ರವಾದ ಕನೌಜ್ ಅನ್ನು ಕೂಡಾ ಮತದಾರರ ಹೆಸರುಗಳನ್ನು ಅಳಿಸಲು ಗುರಿಯಾಗಿಸಲಾಗಿದೆ ಎಂದವರು ಹೇಳಿದರು.
‘‘ ಉತ್ತರಪ್ರದೇಶ ವಿಧಾನಸಭಾ ಚುನಾವಮೆಣೆಗೆ 414 ದಿನಗಳು ಬಾಕಿಯುಳಿದಿವೆ. ಉತ್ತರಪ್ರದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ 50 ಸಾವಿರಕ್ಕೂ ಅಧಿಕ ಮತಗಳನ್ನು ತೆಗೆದುಹಾಕಲು ಸಂಚು ನಡೆಯುತ್ತಿದೆ.ಅದನ್ನು ತಡೆಗಟ್ಟಲು ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ’’ ಎಂದವರು ಹೇಳಿದರು.







