ಅಖಿಲೇಶ್ ಯಾದವ್ ರ ಫೇಸ್ ಬುಕ್ ಖಾತೆ ಅಮಾನತು; ಕೇಂದ್ರ ಸರಕಾರವನ್ನು ದೂರಿದ ಸಮಾಜವಾದಿ ಪಕ್ಷ

ಅಖಿಲೇಶ್ ಯಾದವ್ (Photo: PTI)
ಹೊಸದಿಲ್ಲಿ: ಶುಕ್ರವಾರ ಸಂಜೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರ ಅಧಿಕೃತ ಫೇಸ್ ಬುಕ್ ಪುಟವನ್ನು ಅಮಾನತುಗೊಳಿಸಲಾಗಿದ್ದು, ಈ ನಡೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಅಖಿಲೇಶ್ ಯಾದವ್ ರ ಅಧಿಕೃತ ಫೇಸ್ ಬುಕ್ ಪುಟವನ್ನು ಅಮಾನತುಗೊಳಿಸಿರುವ ಕ್ರಮದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷ, ಈ ನಡೆಯ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವಿದೆ ಎಂದು ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಫೇಸ್ ಬುಕ್ ಮೂಲಗಳು ಅಲ್ಲಗಳೆದಿದ್ದು, ಫೇಸ್ ಬುಕ್ ನ ಮಾತೃ ಸಂಸ್ಥೆ ಮೆಟಾ ಈ ಕ್ರಮ ಕೈಗೊಂಡಿದ್ದು, ಈ ಕ್ರಮದ ಹಿಂದೆ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿವೆ.
ಸುಮಾರು 80 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ಫೇಸ್ ಬುಕ್ ಪೇಜ್ ಅನ್ನು ಶುಕ್ರವಾರ ಸುಮಾರು 6 ಗಂಟೆಗೆ ಅಮಾನತುಗೊಳಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ನಡೆಯನ್ನು ಬಲವಾಗಿ ಖಂಡಿಸಿ, ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ವಕ್ತಾರ ಫಖ್ರುಲ್ ಹಸನ್ ಚಾಂದ್, “ದೇಶದ ಮೂರನೆಯ ಅತಿ ದೊಡ್ಡ ಪಕ್ಷವಾದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಯಾದವ್ ರ ಫೇಸ್ ಬುಕ್ ಖಾತೆಯನ್ನು ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಬಿಜೆಪಿ ಸರಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದು, ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ, ಬಿಜೆಪಿಯ ಜನತಾವಿರೋಧಿ ನೀತಿಗಳನ್ನು ವಿರೋಧಿಸುವುದನ್ನು ಸಮಾಜವಾದಿ ಪಕ್ಷ ಮುಂದುವರಿಸಲಿದೆ” ಎಂದು ಘೋಷಿಸಿದ್ದಾರೆ.







