ಸಮಯ ಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ 12 ವರ್ಷದ ಮುರ್ಸಲಿನ್ ಶೇಖ್

ಮುರ್ಸಲಿನ್ ಶೇಖ್
ಕೊಲ್ಕತ್ತಾ: 12 ವರ್ಷದ ಬಾಲಕನೊಬ್ಬ ತನ್ನ ಕೆಂಪು ಟಿಶರ್ಟ್ ಬಳಸಿ ಭಾರೀ ರೈಲು ದುರಂತವನ್ನು ತಪ್ಪಿಸಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಾಹಸಿ ಬಾಲಕನ್ನು ಮುರ್ಸಲಿನ್ ಶೇಖ್ ಎಂದು ಗುರುತಿಸಲಾಗಿದೆ.
ರೈಲ್ವೇ ಹಳಿಯ ಮೇಲೆ ನಡೆದು ಹೋಗುತ್ತಿದ್ದ ಶೇಖ್, ಹಾನಿಗೊಳಗಾದ ಹಳಿಯನ್ನು ಗಮನಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ರೈಲು ಬರುವುದನ್ನು ಕಂಡ ಬಾಲಕ, ತನ್ನ ಸಮಯ ಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾನೆ ಎಂದು ವರದಿಯಾಗಿದೆ.
ರೈಲು ಸಮೀಪಿಸುತ್ತಿದ್ದಂತೆ ತನ್ನ ಕೆಂಪು ಅಂಗಿಯನ್ನು ಬಿಚ್ಚಿ ಬೀಸಿದ್ದಾನೆ. ಅಪಾಯದ ಸೂಚನೆಯನ್ನು ಅರಿತ ಲೋಕೋ ಪೈಲಟ್ ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಿದ್ದಾರೆ. ಮಳೆಯಿಂದ ಮಣ್ಣು ಮತ್ತು ಬೆಣಚುಕಲ್ಲುಗಳು ಕೊಚ್ಚಿಹೋಗಿದ್ದರಿಂದ ರೈಲ್ವೇ ಹಳಿಗೆ ಹಾನಿಯಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ದುರಂತ ತಪ್ಪಿಸಿದ ಬಾಲಕ ವಲಸೆ ಕಾರ್ಮಿಕರೊಬ್ಬರ ಪುತ್ರನಾಗಿದ್ದಾನೆ. ಹಾನಿಗೊಳಗಾದ ಹಳಿಯ ಭಾಗವನ್ನು ಸರಿಪಡಿಸಿ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು.
ರೈಲ್ವೇ ಅಧಿಕಾರಿಗಳು ಸಮಯಪ್ರಜ್ಞೆ ಮೆರೆದ ಬಾಲಕನಿಗೆ ಪ್ರಮಾಣಪತ್ರ ಮತ್ತು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಮಾಲ್ಡಾ ಉತ್ತರ ಸಂಸದ ಖಗೆನ್ ಮುರ್ಮು, ಕತಿಹಾರ್ ವಿಭಾಗೀಯ ರೈಲ್ವೆ ಮ್ಯಾನೇಜರ್ ಸುರೇಂದ್ರ ಕುಮಾರ್ ಜೊತೆ ಬಾಲಕನ ಮನೆಗೆ ಭೇಟಿ ನೀಡಿ ಆತನನ್ನು ಶ್ಲಾಘಿಸಿದ್ದಾರೆ.