ಎಲ್ಲ ಪ್ರಮುಖ ಇಪಿಎಫ್ಒ ಸೇವೆಗಳು ಈಗ ಒಂದೇ ಲಾಗಿನ್ನಲ್ಲಿ ಲಭ್ಯ: ಕೇಂದ್ರ ಸಚಿವ ಮಾಂಡವೀಯ

ಮನ್ಸುಖ ಮಾಂಡವೀಯ | PTI
ಹೊಸದಿಲ್ಲಿ,ಸೆ.18: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಏಳು ಕೋಟಿಗೂ ಅಧಿಕ ಚಂದಾದಾರರು ಈಗ ಸದಸ್ಯರ ಪೋರ್ಟಲ್ನಲ್ಲಿ ಒಂದೇ ಲಾಗಿನ್ ಬಳಸಿ ಎಲ್ಲ ಪ್ರಮುಖ ಸೇವೆಗಳನ್ನು ಪಡೆಯಬಹುದು ಮತ್ತು ತಮ್ಮ ಭವಿಷ್ಯನಿಧಿ ಖಾತೆಯ ವಿವರಗಳನ್ನು ಪ್ರವೇಶಿಸಬಹುದು ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ ಮಾಂಡವೀಯ ಅವರು ಗುರುವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತನ್ನ ಸದಸ್ಯರಿಗೆ ದಕ್ಷ,ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಇಪಿಎಫ್ಒ ಕೈಗೊಂಡಿರುವ ಪ್ರಮುಖ ಸುಧಾರಣೆಗಳನ್ನು ಎತ್ತಿ ತೋರಿಸಿದರು.
ಪ್ರಸ್ತುತ ಸದಸ್ಯರು ತಮ್ಮ ಭವಿಷ್ಯನಿಧಿ ವಂತಿಗೆಗಳು ಹಾಗೂ ಮುಂಗಡಗಳು ಅಥವಾ ಹಿಂಪಡೆಯುವಿಕೆಗಳನ್ನು ಒಳಗೊಂಡ ವಹಿವಾಟುಗಳನ್ನು ಪರಿಶೀಲಿಸಲು ಇಪಿಎಫ್ಒದ ಪಾಸ್ಬುಕ್ ಪೋರ್ಟಲ್ಗೆ ಲಾಗಿನ್ ಆಗಬೇಕಾಗುತ್ತದೆ.
ಇಪಿಎಫ್ಒ ತನ್ನ ಸದಸ್ಯ ಪೋರ್ಟಲ್ನಲ್ಲಿ ‘ಪಾಸ್ಬುಕ್ ಲೈಟ್’ ಹೆಸರಿನ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇದು ಸದಸ್ಯರು ಪಾಸ್ಬುಕ್ ಪೋರ್ಟಲ್ಗೆ ಹೋಗದೇ ಸದಸ್ಯರ ಪೋರ್ಟಲ್ ಮೂಲಕವೇ ತಮ್ಮ ಪಾಸ್ಬುಕ್ ಹಾಗೂ ತಮ್ಮ ವಂತಿಗೆಗಳು, ಹಿಂದೆಗೆತಗಳು ಮತ್ತು ಉಳಿಕೆ ಮೊತ್ತಗಳ ಸಾರಾಂಶವನ್ನು ಸರಳ ಮತ್ತು ಸುಲಭವಾಗಿ ಪರಿಶೀಲಿಸಲು ಅವಕಾಶವನ್ನು ಕಲ್ಪಿಸುತ್ತದೆ.
ಈ ಉಪಕ್ರಮವು ಒಂದೇ ಲಾಗಿನ್ ಮೂಲಕ ಪಾಸ್ಬುಕ್ ಪ್ರವೇಶ ಸೇರಿದಂತೆ ಎಲ್ಲ ಪ್ರಮುಖ ಸೇವೆಗಳನ್ನು ಒದಗಿಸಲಿದೆ ಮತ್ತು ಬಳಕೆದಾರರಿಗೆ ಅನುಕೂಲವನ್ನು ಹೆಚ್ಚಿಸಲಿದೆ ಎಂದು ಮಾಂಡವೀಯ ವಿವರಿಸಿದರು. ಆದಾಗ್ಯೂಗ್ರಾಫಿಕಲ್ ಚಿತ್ರಣ ಸೇರಿದಂತೆ ಪಾಸ್ಬುಕ್ ವಿವರಗಳ ಸಮಗ್ರ ವೀಕ್ಷಣೆಗಾಗಿ ಸದಸ್ಯರು ಅಸ್ತಿತ್ವದಲ್ಲಿರುವ ಪಾಸ್ಬುಕ್ ಪೋರ್ಟಲ್ನ ಬಳಕೆಯನ್ನೂ ಮುಂದುವರಿಸಬಹುದು ಎಂದರು.







