ಮಹಾರಾಷ್ಟ್ರ ಚುನಾವಣೆ | ಎಲ್ಲ ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಕೆ, ಸ್ಪರ್ಧೆಗೆ ಸಿದ್ಧ : ಕಾಂಗ್ರೆಸ್
Photo : ANI
ಮುಂಬೈ: ಸೀಟು ಹಂಚಿಕೆಯ ಕುರಿತಂತೆ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿಯಲ್ಲಿ ಅಸಮಾಧಾನ ತಲೆದೋರಿದೆ ಎಂಬ ವರದಿಗಳ ಹಿನ್ನೆಲೆಯಲ್ಲೇ, ಮಹಾರಾಷ್ಟ್ರದ ಎಲ್ಲ 288 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ನಾಮಪತ್ರ ಸಲ್ಲಿಕೆಯನ್ನು ಪೂರ್ಣಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಬುಧವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ವರ್ಷ ಗಾಯಕ್ವಾಡ್ ಮತ್ತು ನಸೀಂ ಖಾನ್ ಅವರೊಡನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿಂದು ಸ್ಪರ್ಧೆಗೆ ಸಿದ್ಧವಾಗಿದ್ದೇವೆ ಎಂದು ಘೋಷಿಸಿದರು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರದಂದು ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಒಳಗೊಂಡಿರುವ ಮಹಾವಿಕಾಸ್ ಅಘಾಡಿಯು 11 ವಿಧಾನಸಭಾ ಕ್ಷೇತ್ರಗಳಿಗೆ ಇನ್ನೂ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ ಎನ್ನಲಾಗಿದೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಚೆನ್ನಿತ್ತಲ, ಮಹಾವಿಕಾಸ್ ಅಘಾಡಿ ಅಂಗಪಕ್ಷಗಳ ನಡುವೆ ತಪ್ಪು ಗ್ರಹಿಕೆ ಉಂಟಾಗಿತ್ತಾದರೂ, ಆ ಅನಿಶ್ಚಿತತೆಯ ಕಾರಣಕ್ಕೆ ಮೈತ್ರಿಪಕ್ಷಗಳ ನಡುವೆ ಯಾವುದೇ ಕಲಹ ಸೃಷ್ಟಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ನಡುವೆ, ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಮಹಾಯುತಿ ಮೈತ್ರಿಕೂಟವು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿಲ್ಲ ಎಂದು ವರದಿಯಾಗಿದೆ.