ಸರ್ವಪಕ್ಷ ಸಭೆ| ಬಜೆಟ್ ಅಧಿವೇಶನದಲ್ಲಿ ಎಸ್ಐಆರ್, ಜಿರಾಮ್ಜಿ, ಯುಜಿಸಿ ಕುರಿತು ವಿಸ್ತೃತ ಚರ್ಚೆಗೆ ಪ್ರತಿಪಕ್ಷಗಳ ಆಗ್ರಹ

Photo Credit : PTI
ಹೊಸದಿಲ್ಲಿ,ಜ.27: ಬುಧವಾರ ಬಜೆಟ್ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಸರ್ವಪಕ್ಷ ಸಭೆ ನಡೆದಿದ್ದು, ಸದನದ ಕಾರ್ಯನಿರ್ವಹಣೆಯನ್ನು ಸುಗಮವಾಗಿ ನಡೆಸುವ ಕುರಿತು ಗಾಢವಾಗಿ ಚರ್ಚಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಹಿರಿಯ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹಾಗೂ ಪ್ರತಿಪಕ್ಷಗಳ ಹಲವಾರು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರು, ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳ ಕುರಿತು ಸರಕಾರವು ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಳ್ಳದೇ ಇರುವುದರಿಂದ ಪ್ರತಿಪಕ್ಷಗಳ ಅಸಮಾಧಾನಗೊಂಡಿವೆ ಎಂದರು. ಆದರೆ ಸಂಸತ್ ಕಲಾಪದ ಕಾರ್ಯಸೂಚಿಯನ್ನು ಆನಂತರ ಪ್ರಸಾರ ಮಾಡಲಾಗುವುದೆಂದು ಸಚಿವರುಗಳು ತಿಳಿಸಿದ್ದಾರೆ. ಆದರೆ ಈ ವಿವರಣೆಯು ಅತೃಪ್ತಿಕರವಾಗಿದೆ ಮತ್ತು ಸರಕಾರವು ಪಾರದರ್ಶಕತೆಯ ಕೊರತೆಯನ್ನು ಹೊಂದಿದೆ ಎಂದು ಆರೋಪಿಸಿದರು.
ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು ಸುದ್ದಿಗಾರರ ಜೊತೆ ಮಾತನಾಡುತ್ತಾ, ಎಂನರೇಗಾವನ್ನು ತೆರವುಗೊಳಿಸಲಿರುವ ನೂತನವಾಗಿ ಜಾರಿಗೊಳಿಸಲಾದ ವಿಬಿ-ಜಿರಾಮ್-ಜಿ ಕಾಯ್ದೆಯನ್ನು ಸರಕಾರವು ಹಿಂತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಈ ಅಧಿವೇಶನದಲ್ಲಿ ಬಜೆಟ್ಗೆ ಸಂಬಂಧಿಸಿದ ವಿಷಯಗಳಿಗಷ್ಟೇ ಸರಕಾರವು ಪ್ರಮುಖ ಆದ್ಯತೆಯನ್ನು ನೀಡಲಿದೆ ಎಂದು ಹೇಳಿದ ಅವರು, ಸಂಸತ್ನ ಸುಗಮ ನಿರ್ವಹಣೆಗಾಗಿ ಸಹಕರಿಸುವಂತೆ ರಿಜಿಜು ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ನೂತನ ಯುಜಿಸಿ ಮಾರ್ಗದರ್ಶಿ ಸೂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಚರ್ಚೆಯಾಗಬೇಕೆಂಬ ಕುರಿತ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸಿದ ಅವರು, ಸರಕಾರವು ಚರ್ಚೆಗೆ ಮುಕ್ತವಾಗಿದೆ. ಆದರೆ ಬಜೆಟ್ ಅನ್ನು ಅಂಗೀಕಾರಗೊಳ್ಳುವಂತೆ ಮಾಡುವ ಸಾಂವಿಧಾನಿಕ ಹೊಣೆಗಾರಿಕೆಯೂ ಪ್ರತಿಪಕ್ಷಗಳಿಗಿದೆ ಎಂದರು.
ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಸಂಸತ್ನಲ್ಲಿ ಚರ್ಚೆಯಾಗಬೇಕೆಂದು ತನ್ನ ಪಕ್ಷವು ಸರ್ವಪಕ್ಷ ಸಭೆಯಲ್ಲಿ ಬಲವಾಗಿ ಒತ್ತಾಯಿಸಿರುವುದಾಗಿ ಟಿಎಂಸಿ ಸಂಸದೆ ಸಾಗರಿಕಾ ಘೋಷ್ ತಿಳಿಸಿದ್ದಾರೆ. ಎಸ್ಐಆರ್ನ ಲೋಪಗಳಿಂದಾಗಿ ಪ.ಬಂಗಾಳದಲ್ಲಿ 10.50 ಲಕ್ಷಕ್ಕೂ ಆಧಿಕ ಮಂದಿ ಬಾಧಿತರಾಗಿದ್ದಾರೆಂದು ಅವರು ಆಪಾದಿಸಿದರು. ಎಸ್ಐಆರ್ ಬಗ್ಗೆ ಸಂಸತ್ನಲ್ಲಿ ಗಂಭೀರ ಚರ್ಚೆಯಾಗಬೇಕೆಂದು ಐಯುಎಂಎಲ್ ಸಂಸದೆ ಇ.ಟಿ. ಮುಹಮ್ಮದ್ ಬಶೀರ್ ಆಗ್ರಹಿಸಿದ್ದಾರೆ.
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರಕಾರಗಳಿಗೆ ಬಿಡುಗಡೆಗೊಳ್ಳಬೇಕಾಗಿರುವ ನಿಧಿಯನ್ನು ಕೇಂದ್ರ ಸರಕಾರ ತಡೆಹಿಡಿಯುತ್ತಿದೆಯೆಂದು ಅವರು ಆಪಾದಿಸಿದರು.
ನಾಳೆ ಜಂಟಿ ಅಧಿವೇಶನ, ಫೆ 1ರಂದು ಕೇಂದ್ರ ಬಜೆಟ್
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಲೋಕಸಭೆ ಹಾಗೂ ರಾಜ್ಯಸಭಾದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಜನವರಿ 29ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಹಾಗೂ ಫೆಬ್ರವರಿ 1ರಂದು ರವಿವಾರ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಮಂಡಿಸಲಿರುವ ಬಜೆಟ್ ಇದಾಗಲಿದೆ.
ಮೊದಲನೆ ಹಂತದ ಬಜೆಟ್ ಅಧಿವೇಶನವು ಫೆಬ್ರವರಿ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತ ವಂದನಾ ನಿರ್ಣಯವನ್ನು ಚರ್ಚೆಗಿಡಲಾಗುವುದು ಹಾಗೂ ನಿರ್ಣಯವನ್ನು ಅಂಗೀಕರಿಸಲಾಗುವುದು. ಬಿಡುವಿನ ಬಳಿಕ ಮಾರ್ಚ್ 9ರಂದು ಸಂಸತ್ ಅಧಿವೇಶನ ಪುನಾರಂಭಗೊಳ್ಳಲಿದ್ದು, ಎಪ್ರಿಲ್ 2ರಂದು ಸಮಾರೋಪಗೊಳ್ಳಲಿದೆ.







