1996ರ ಗಾಝಿಯಾಬಾದ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : 1996ರ ಗಾಝಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಮುಹಮ್ಮದ್ ಇಲ್ಯಾಸ್ ನನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ.
1996ರ ಎಪ್ರಿಲ್ 27ರಂದು ಗಾಝಿಯಾಬಾದ್ ಬಸ್ ನಿಲ್ದಾಣದಲ್ಲಿ ಬಸ್ಸಿನೊಳಗೆ ಸಂಭವಿಸಿದ ಸ್ಫೋಟದಲ್ಲಿ 18 ಜನರು ಮೃತಪಟ್ಟಿದ್ದರು ಮತ್ತು 48 ಜನರು ಗಾಯಗೊಂಡಿದ್ದರು.
ನ್ಯಾಯಮೂರ್ತಿ ಸಿದ್ಧಾರ್ಥ್ ಮತ್ತು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ವಿಭಾಗೀಯ ಪೀಠ ಮುಹಮ್ಮದ್ ಇಲ್ಯಾಸ್ನನ್ನು ಭಾರವಾದ ಹೃದಯದಿಂದ ಖುಲಾಸೆಗೊಳಿಸುವುದಾಗಿ ಹೇಳಿದೆ. ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದೆ.
ಇಲ್ಯಾಸ್ಗೆ ವಿಧಿಸಿದ್ದ ಶಿಕ್ಷೆಯನ್ನು ಬದಿಗೆ ಸರಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಲು ಬಳಸಿದ ಏಕೈಕ ಪುರಾವೆ ಎಂದರೆ ಇಲ್ಯಾಸ್ ತಪ್ಪೊಪ್ಪಿಗೆ ಹೇಳಿಕೆಯಾಗಿದೆ ಎಂದು ಗಮನಿಸಿದೆ. ಲುಧಿಯಾನದಲ್ಲಿನ ನಿವಾಸದಿಂದ ಬಂಧನದ ವೇಳೆ ಪೊಲೀಸರು ಅದನ್ನು ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದೆ.





