ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಕಾರ

Credit: PTI File Photo
ಪ್ರಯಾಗ್ ರಾಜ್: ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ವೈರತ್ವವನ್ನು ಪ್ರಚೋದಿಸಿದ ಆರೋಪದ ಮೇಲೆ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧ ಘಾಝಿಯಾಬಾದ್ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಅನ್ನು ರದ್ದುಗೊಳಿಸಲು ಗುರುವಾರ ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ವಿವಾದಾತ್ಮಕ ಅರ್ಚಕ ಯತಿ ನರಸಿಂಗಾನಂದ್ ಸಹಚರರೊಬ್ಬರು ನೀಡಿದ್ದ ದೂರನ್ನು ಆಧರಿಸಿ, ಮುಹಮ್ಮದ್ ಝುಬೈರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಆದರೆ, ತನಿಖೆಯ ವೇಳೆ ಮುಹಮ್ಮದ್ ಝುಬೇರ್ ಬಹುಶಃ ಬಂಧನಕ್ಕೊಳಗಾಗುವುದಿಲ್ಲ ಎಂದು ನ್ಯಾ. ಸಿದ್ಧಾರ್ಥ ವರ್ಮ ಹಾಗೂ ನ್ಯಾ. ಡಾ. ವೈ.ಕೆ.ಶ್ರೀವಾಸ್ತವ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಹೇಳಿತು. ಇದೇ ವೇಳೆ, ಎಫ್ಐಆರ್ ಅನ್ನು ಆಧರಿಸಿದ ತನಿಖೆಯು ಮುಂದುವರಿಯಲಿದೆ ಎಂದೂ ನ್ಯಾಯಾಲಯ ನಿರ್ದೇಶನ ನೀಡಿತು.
ಯತಿ ನರಸಿಂಗಾನಂದ್ ವಿರುದ್ಧ ಮುಸ್ಲಿಮರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶದಿಂದ ಮುಹಮ್ಮದ್ ಝುಬೈರ್ ಅಕ್ಟೋಬರ್ 3, 2024ರಂದು ನಡೆದಿದ್ದ ಅವರ ಹಳೆಯ ಕಾರ್ಯಕ್ರಮವೊಂದರ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ, ಯತಿ ನರಸಿಂಗಾನಂದ್ ಸರಸ್ವತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಉದಿತ ತ್ಯಾಗಿ ಸಲ್ಲಿಸಿದ್ದ ದೂರನ್ನು ಆಧರಿಸಿ, ಎಫ್ಐಆರ್ ದಾಖಲಾಗಿತ್ತು.
ವಿವಾದಾತ್ಮಕ ಅರ್ಚಕ ಯತಿ ನರಸಿಂಗಾನಂದ್ ವಿರುದ್ಧ ಮೂಲಭೂತವಾದಿ ಭಾವನೆಗಳನ್ನು ಪ್ರಚೋದಿಸಲೆಂದೇ ಅವರು ಪ್ರವಾದಿ ಮುಹಮ್ಮದ್ ಕುರಿತು ನೀಡಿದ್ದ ಪ್ರಚೋದನಾಕಾರಿ ಹೇಳಿಕೆಯ ವೀಡಿಯೊ ತುಣುಕುಗಳನ್ನು ಸೇರಿಸಿ ಮುಹಮ್ಮದ್ ಝುಬೈರ್, ಅವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಎಂದೂ ಈ ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಕ್ರಮವನ್ನು ಪ್ರಶ್ನಿಸಿ, ಅಲಹಾಬಾದ್ ಹೈಕೋರ್ಟ್ ಗೆ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದ ಮುಹಮ್ಮದ್ ಝುಬೈರ್, ತಮ್ಮ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಬೇಕು ಹಾಗೂ ಬಲವಂತದ ಕ್ರಮದಿಂದ ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು. ನನ್ನ ಎಕ್ಸ್ ಪೋಸ್ಟ್ ನಲ್ಲಿ ನರಸಿಂಗಾನಂದ್ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿರಲಿಲ್ಲ ಎಂದೂ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ನಾನು ಕೇವಲ ನರಸಿಂಗಾನಂದರ ಕೃತ್ಯಗಳ ಕುರಿತು ಪೊಲೀಸ್ ಪ್ರಾಧಿಕಾರಗಳನ್ನು ಎಚ್ಚರಿಸಿದ್ದೆ ಹಾಗೂ ಕಾನೂನಿನ ಪ್ರಕಾರ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಹೀಗಾಗಿ, ಇದು ಎರಡು ಸಮುದಾಯಗಳ ಜನರ ನಡುವಿನ ಸೌಹಾರ್ದತೆಯನ್ನು ಹಾಳುಗೆಡವಿದ ಅಥವಾ ದ್ವೇಷ ಭಾವನೆಯನ್ನು ಕೆಡಿಸಿದ ಆರೋಪಕ್ಕೆ ಗುರಿಯಾಗುವುದಿಲ್ಲ ಎಂದು ಮುಹಮ್ಮದ್ ಝುಬೈರ್ ತಮ್ಮ ರಿಟ್ ಅರ್ಜಿಯಲ್ಲಿ ವಾದ ಮಂಡಿಸಿದ್ದರು.
ಈಗಾಗಲೇ ಸಾರ್ವಜನಿಕ ತಾಣದಲ್ಲಿರುವ ನರಸಿಂಗಾನಂದರದೇ ವೀಡಿಯೊಗಳನ್ನು ಹಂಚಿಕೊಂಡಿದ್ದ ಆಧಾರದಲ್ಲಿ ತಮ್ಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಮಾನಹಾನಿ ಸೆಕ್ಷನ್ ಅನ್ನು ಹೇರಲು ಬರುವುದಿಲ್ಲ ಹಾಗೂ ಈ ಕೃತ್ಯವು ಮಾನಹಾನಿ ಎಸಗಿದ ಆರೋಪದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದೂ ಅವರು ತಮ್ಮ ರಿಟ್ ಅರ್ಜಿಯಲ್ಲಿ ವಾದಿಸಿದ್ದರು.
ಇದಕ್ಕೂ ಮುನ್ನ ವಾದಿ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ್ದ ಹೈಕೋರ್ಟ್, ಮುಹಮ್ಮದ್ ಝುಬೈರ್ ಸಲ್ಲಿಸಿರುವ ರಿಟ್ ಅರ್ಜಿ ಕುರಿತ ತೀರ್ಪನ್ನು ಮಾರ್ಚ್ 3ರಂದು ಕಾಯ್ದಿರಿಸಿತ್ತು.







