ಸಿಖ್ಖರ ಕುರಿತ ಹೇಳಿಕೆ ವಿವಾದ: ರಾಹುಲ್ ಗಾಂಧಿ ಅರ್ಜಿಯ ತೀರ್ಪನ್ನು ಕಾದಿರಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ | ANI
ಅಲಹಾಬಾದ್: ಸಿಖ್ ಸಮುದಾಯದ ಸಮಸ್ಯೆಗಳ ಕುರಿತು ತಾವು ನೀಡಿದ್ದ ಹೇಳಿಕೆ ಕುರಿತು ವಾರಾಣಸಿ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಕುರಿತ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಕಾಯ್ದಿರಿಸಿದೆ.
ಸಿಖ್ ಸಮುದಾಯದ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಕುರಿತು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳುವಂತೆ ಕೋರಿರುವ ಅರ್ಜಿಯ ಮರು ವಿಚಾರಣೆ ನಡೆಸುವಂತೆ ಜುಲೈ 22ರಂದು ವಾರಾಣಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವೊಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಮೀರ್ ಜೈನ್, ತೀರ್ಪನ್ನು ಕಾಯ್ದಿರಿಸಿದ್ದಾರೆ.
ವಾರಾಣಸಿಯ ವಕೀಲ ನಾಗೇಶ್ವರ್ ಮಿಶ್ರಾ ಎಂಬುವವರು ಸಲ್ಲಿಸಿದ್ದ ಪರಾಮರ್ಶೆ ಅರ್ಜಿಯ ವಿಚಾರಣೆ ನಡೆಸಿದ್ದ ವಾರಾಣಸಿ ಸೆಷನ್ಸ್ ನ್ಯಾಯಾಲಯವು, ಅರ್ಜಿಯ ಮರು ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಇತ್ತೀಚಿನ ಸುಪ್ರೀಂ ಕೋರ್ಟ್ ನ ಸೂಕ್ತ ತೀರ್ಪುಗಳನ್ನು ಗಣನೆಗೆ ತೆಗೆದುಕೊಂಡು, ಅರ್ಜಿಯ ಮರು ವಿಚಾರಣೆ ನಡೆಸಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೆಷನ್ಸ್ ನ್ಯಾಯಾಲಯ ಸೂಚಿಸಿತ್ತು.
2024ರಲ್ಲಿ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದೂರುದಾರ ನಾಗೇಶ್ವರ್ ಮಿಶ್ರಾ, ರಾಹುಲ್ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಭಾರತದಲ್ಲಿನ ಸಿಖ್ಖರಲ್ಲಿ ಅಭದ್ರತೆ ಮನೆ ಮಾಡಿದೆ ಎಂದಿದ್ದಾರೆ ಎಂದು ಆರೋಪಿಸಿದ್ದರು.
ಆದರೆ, ಈ ಅರ್ಜಿ ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿದೆ ಎಂದು ಅಭಿಪ್ರಾಯ ಪಟ್ಟಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ, ದೂರುದಾರ ನಾಗೇಶ್ವರ್ ರಾವ್ ವಾರಾಣಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.







