ಅಪರಾಧ ಸಾಬೀತಾಗದಿದ್ದರೂ 24 ವರ್ಷದಿಂದ ಜೈಲಿನಲ್ಲಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ Allahabad High Court

ಅಲಹಾಬಾದ್ ಹೈಕೋರ್ಟ್ | Photo Credit : PTI
ಪ್ರಯಾಗ್ ರಾಜ್: ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬರನ್ನು 24 ವರ್ಷಗಳ ನಂತರ ಬಿಡುಗಡೆ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಕೇವಲ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿ ಶಿಕ್ಷೆ ವಿಧಿಸಿರುವುದು ಗಂಭೀರ ಲೋಪವಾಗಿದ್ದು, ಅಪರಾಧವನ್ನು ಸಾಬೀತುಪಡಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣವು 2000ರ ಅಕ್ಟೋಬರ್ 29ರಂದು ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕತ್ರಾ ಗ್ರಾಮದಲ್ಲಿ ನಡೆದ ದರೋಡೆ ಘಟನೆಗೆ ಸಂಬಂಧಿಸಿದೆ. ದೂರುದಾರ ಓಂ ಪ್ರಕಾಶ್ ಅವರ ಮನೆಗೆ 10ರಿಂದ 15 ಮಂದಿ ಡಕಾಯಿತರ ಗುಂಪು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದು, ಪರಾರಿಯಾಗುವ ವೇಳೆ ಗುಂಡು ಹಾರಿಸಿದ್ದರಿಂದ ಎಚ್ಚರಿಕೆ ನೀಡಲು ಬಂದ ಕೆಲ ಗ್ರಾಮಸ್ಥರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಘಟನೆ ಸಂಬಂಧ ಆಝಾದ್ ಖಾನ್ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ದೂರುದಾರರು ಹಾಗೂ ಗ್ರಾಮಸ್ಥರು ಗುರುತಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಮೈನ್ ಪುರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ, ಆಝಾದ್ ಖಾನ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು IPC ಸೆಕ್ಷನ್ 395 (ಡಕಾಯಿತಿ) ಮತ್ತು 397 (ಕೊಲೆ ಯತ್ನದೊಂದಿಗೆ ಡಕಾಯಿತಿ) ಅಡಿಯಲ್ಲಿ ಆರೋಪಗಳನ್ನು ರೂಪಿಸಿ, ಅವರ ತಪ್ಪೊಪ್ಪಿಗೆಯನ್ನು ದಾಖಲಿಸಿಕೊಂಡಿತ್ತು. ನಂತರ ಸೆಕ್ಷನ್ 313 CRPC ಅಡಿಯಲ್ಲಿ ದಾಖಲಿಸಿದ ಹೇಳಿಕೆಯಲ್ಲಿ, ಅವರು ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಆಧರಿಸಿ ವಿಚಾರಣಾ ನ್ಯಾಯಾಲಯವು ಖಾನ್ ಅವರನ್ನು ಅಪರಾಧಿ ಎಂದು ಘೋಷಿಸಿ, IPC ಸೆಕ್ಷನ್ 395 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ಸೆಕ್ಷನ್ 397 ಅಡಿಯಲ್ಲಿ 7 ವರ್ಷಗಳ ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ವಿಧಿಸಿತ್ತು.
ಈ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯದ ಕ್ರಮವನ್ನು ತೀವ್ರವಾಗಿ ಟೀಕಿಸಿದೆ. ಅಪರಾಧ ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿದ್ದು, ಈ ಪ್ರಕರಣದಲ್ಲಿ ಯಾವುದೇ ನೇರ ಪುರಾವೆ ಅಥವಾ ಪ್ರತ್ಯಕ್ಷದರ್ಶಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ ಎಂಬುದನ್ನು ಪೀಠವು ಉಲ್ಲೇಖಿಸಿದೆ.
ಪ್ರಾಸಿಕ್ಯೂಷನ್ ಕೇವಲ ಒಬ್ಬ ಔಪಚಾರಿಕ ಸಾಕ್ಷಿಯಾದ ಕಾನ್ಸ್ಟೇಬಲ್ ಇಕ್ಬಾಲ್ ಸಿಂಗ್ ಅವರನ್ನು ಮಾತ್ರ ವಿಚಾರಣೆ ನಡೆಸಿದ್ದು, ಅವರು FIR ಮತ್ತು ಆರೋಪಪಟ್ಟಿಯ ಪ್ರತಿಗಳನ್ನು ದ್ವಿತೀಯ ಸಾಕ್ಷ್ಯವಾಗಿ ಸಲ್ಲಿಸಿದ್ದಾರೆ. ದೂರುದಾರನನ್ನಾಗಲಿ ಅಥವಾ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಯನ್ನಾಗಲಿ ಹಾಜರುಪಡಿಸದ ಕಾರಣ, ತಾಂತ್ರಿಕವಾಗಿ ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, 2001ರ ಅಕ್ಟೋಬರ್ 24ರಿಂದ 2002ರ ಫೆಬ್ರವರಿ 5ರ ನಡುವೆ ಆಝಾದ್ ಖಾನ್ 7 ಬಾರಿ ತಪ್ಪೊಪ್ಪಿಗೆ ಅರ್ಜಿಗಳನ್ನು ಸಲ್ಲಿಸಿದ್ದು, ಪೊಲೀಸರೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸಿದ್ದ ಕಾರಣ ಜೈಲಿನಿಂದ ಬಿಡುಗಡೆಯಾದ ನಂತರ ದೂರುದಾರರಿಂದ ಕೊಲ್ಲಲ್ಪಡುವ ಭಯವಿದೆ ಎಂದು ಉಲ್ಲೇಖಿಸಿದ್ದರು. ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಸೆಕ್ಷನ್ 313 CRPC ಅಡಿಯಲ್ಲಿ ದಾಖಲಿಸಲಾದ ಆರೋಪಿಯ ಹೇಳಿಕೆ ಶಿಕ್ಷೆಗೆ ಆಧಾರವಾಗಲಾರದು; ಅದು ಪ್ರಾಸಿಕ್ಯೂಷನ್ ಸಾಕ್ಷ್ಯಕ್ಕೆ ಬದಲಿಯಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಅಪರಾಧಕ್ಕೆ ಸಂಬಂಧಿಸಿದ ಪುರಾವೆಗಳು ಸಾಬೀತಾಗದ ಹೊರತು, ಆರೋಪಿಯ ಹೇಳಿಕೆಯ ದೋಷಾರೋಪಣಾ ಭಾಗವನ್ನು ಮಾತ್ರ ಆಧರಿಸಿ ಅಪರಾಧ ನಿರ್ಣಯ ಮಾಡಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, 2002ರ ಫೆಬ್ರವರಿ 5ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಆಝಾದ್ ಖಾನ್ ಅವರನ್ನು IPC ಸೆಕ್ಷನ್ 395 ಮತ್ತು 397ರ ಆರೋಪಗಳಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಿ, ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
ಸೌಜನ್ಯ: indianexpress.com







