ಸಂತ್ರಸ್ತೆಯನ್ನು ಮೂರು ತಿಂಗಳಲ್ಲಿ ವಿವಾಹವಾಗಬೇಕು; ಅತ್ಯಾಚಾರ ಆರೋಪಿಗೆ ಜಾಮೀನು ನೀಡುವಾಗ ಷರತ್ತು ವಿಧಿಸಿದ ಅಲಹಾಬಾದ್ ಹೈಕೋರ್ಟ್!

Photo : Barandbench
ಅಲಹಾಬಾದ್: ಅತ್ಯಾಚಾರ ಸಂತ್ರಸ್ತೆಯನ್ನು ಇನ್ನು ಮೂರು ತಿಂಗಳೊಳಗೆ ವಿವಾಹವಾಗಬೇಕು ಎಂಬ ಷರತ್ತು ವಿಧಿಸಿ, ಅತ್ಯಾಚಾರ ಆರೋಪಿಯೊಬ್ಬನಿಗೆ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
“ಪ್ರಾಮಾಣಿಕವಾಗಿ ನಾನು ಅತ್ಯಾಚಾರ ಸಂತ್ರಸ್ತೆಯನ್ನು ನನ್ನ ವಿವಾಹಿತ ಪತಿಯನ್ನಾಗಿ ಸ್ವೀಕರಿಸಿ, ಆಕೆಯ ಯೋಗಕ್ಷೇಮ ನೋಡಿಕೊಳ್ಳಲು ಸಿದ್ಧನಿದ್ದೇನೆ” ಎಂದು 26 ವರ್ಷದ ಅತ್ಯಾಚಾರ ಆರೋಪಿಯು ನೀಡಿದ ಹೇಳಿಕೆಯನ್ನು ಆಧರಿಸಿ, ಫೆಬ್ರವರಿ 20ರಂದು ನ್ಯಾ. ಕೃಷನ್ ಪಹಲ್ ಈ ಆದೇಶ ಹೊರಡಿಸಿದ್ದಾರೆ.
“ಅರ್ಜಿದಾರನು ಜೈಲಿನಿಂದ ಬಿಡುಗಡೆಗೊಂಡ ಮೂರು ತಿಂಗಳೊಳಗಾಗಿ ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗಬೇಕು” ಎಂದು ಜಾಮೀನು ಷರತ್ತು ವಿಧಿಸಿರುವ ನ್ಯಾಯಾಲಯ, ಆರೋಪಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲು ಆದೇಶಿಸಿದೆ.
ಆದರೆ, ಇಂತಹ ಆದೇಶವನ್ನು ಯಾಕೆ ಹೊರಡಿಸಲಾಯಿತು ಹಾಗೂ ದೂರುದಾರೆಯ ಹೇಳಿಕೆಯನ್ನು ಆಲಿಸಲಾಗಿದೆಯೆ ಎಂಬ ಕುರಿತು ನ್ಯಾಯಾಲಯ ಮೌನ ವಹಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಹಾಗೂ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ದೂರು ದಾಖಲಿಸಿಕೊಂಡಿದ್ದ ಆಗ್ರಾ ಪೊಲೀಸರು, ಸೆಪ್ಟೆಂಬರ್ 24ರಂದು ಆರೋಪಿ ನರೇಶ್ ಮೀನಾ ಅಲಿಯಾಸ್ ನರ್ಸರಂ ಮೀನಾನನ್ನು ಬಂಧಿಸಿದ್ದರು. ಈ ಪ್ರಕರಣ ಆಗ್ರಾದ ಖಂಡೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತೆಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ, ಆಕೆಯಿಂದ 9 ಲಕ್ಷ ರೂ. ಲಂಚ ಪಡೆದಿದ್ದ ಆರೋಪಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದ. ನಂತರ, ಆ ಅಶ್ಲೀಲ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದೆ.