ಬಿಜೆಪಿಯಿಂದ ಎಎಪಿ ಶಾಸಕರ ಖರೀದಿ ಆರೋಪ ; ನೋಟಿಸ್ ನೀಡಲು ಮತ್ತೆ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ ದಿಲ್ಲಿ ಪೊಲೀಸರು
Photo: PTI
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ತನಿಖೆಗೆ ಸಂಬಂಧಿಸಿ ದಿಲ್ಲಿ ಪೊಲೀಸಿನ ಅಪರಾಧ ದಳ ನೋಟಿಸು ನೀಡಲು ಶನಿವಾರ ತೆರಳಿರುವುದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ನಾಟಕೀಯ ವಿದ್ಯಾಮಾನಕ್ಕೆ ಕಾರಣವಾಯಿತು.
ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಮಟ್ಟದ ಅಧಿಕಾರಿಯ ನೇತೃತ್ವದ ತಂಡ ನೋಟಿಸ್ ಕೇಜ್ರಿವಾಲ್ ಅವರ ಹೆಸರಿನಲ್ಲಿರುವುದರಿಂದ ಅವರಿಗೆ ಮಾತ್ರ ಹಸ್ತಾಂತರಿಸಲು ಸಾಧ್ಯ ಎಂದು ತಿಳಿಸಿತು. ಈ ಸಂದರ್ಭ ಮುಖ್ಯಮಂತ್ರಿ ನಿವಾಸದಲ್ಲಿದ್ದ ಅಧಿಕಾರಿಗಳು ನೋಟಿಸ್ ಸ್ವೀಕರಿಸಿ ಹಿಂಬರಹ ನೀಡಲು ಸಿದ್ಧ ಎಂದು ಹೇಳಿದರು.
ಮುಖ್ಯಮಂತ್ರಿ ಅವರ ನಿವಾಸದ ಕಂಪೌಂಡ್ ಹೊರಗೆ ಎಎಪಿ ನಾಯಕರಾದ ಜಾಸ್ಮಿನ್ ಶಾ ಅವರು ನೋಟಿಸನ್ನು ಕೇಜ್ರಿವಾಲ್ ಅವರಿಗೆ ಖುದ್ದಾಗಿ ಹಸ್ತಾಂತರಿಸಲು ಬಯಸುತ್ತಿರುವ ಕುರಿತಂತೆ ಕಾನೂನು ನಿಬಂಧನೆಯ ಬಗ್ಗೆ ಅಪರಾಧ ದಳದ ಅಧಿಕಾರಿಗಳಿಂದ ವಿವರಣೆ ಪಡೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂತು.
‘‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಪ್ರವೇಶ ದ್ವಾರದ ಮುಂದೆ ನಿಂತಿದ್ದ ದಿಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ನಾನು ಸರಳ ಪ್ರಶ್ನೆ ಕೇಳಿದ್ದೆ: ನೀವು ಯಾವ ಕಾನೂನಿನ ಅಡಿಯಲ್ಲಿ ಮುಖ್ಯಮಂತ್ರಿ ಅವರಿಗೆ ಖುದ್ದಾಗಿ ನೋಟಿಸ್ ನೀಡಲು ಬಯಸುತ್ತಿದ್ದೀರಿ? ಎಂದು. ಅವರಲ್ಲಿ ಉತ್ತರ ಇರಲಿಲ್ಲ. ಇದರಿಂದ ಅವರು ಇಲ್ಲಿಗೆ ಬಂದಿರುವುದು ನಾಟಕವಾಡಲು ಎಂಬುದು ಸ್ಪಷ್ಟವಾಯಿತು’’ ಎಂದು ಶಾ ಎಕ್ಸ್ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಬರೆದಿದ್ದಾರೆ.
ಪೊಲೀಸರು ಉದ್ದೇಶಪೂರ್ವಕವಾಗಿ ನೋಟಿಸ್ ಅನ್ನು ಮುಖ್ಯಮಂತ್ರಿ ಅವರ ಕಚೇರಿಗೆ ನೀಡಿಲ್ಲ ಎಂದು ದಿಲ್ಲಿ ಸಂಪುಟ ಸಚಿವ ಸೌರಭ್ ಭಾರದ್ವಾಜ್ ಅವರು ಪ್ರತಿಪಾದಿಸಿದ್ದಾರೆ. ‘‘ಇದು ಮೋದಿ ಸರಕಾರಕ್ಕೆ ತುಂಬಾ ಮುಜುಗರ ತಂದಿದೆ. ಬಿಜೆಪಿ ತಂತ್ರ ಇಂದು ಸಂಪೂರ್ಣ ಬಯಲಾಗಿದೆ. ನಿನ್ನೆ ಎಲ್ಲಾ ಬಿಜೆಪಿ ವಕ್ತಾರರು ಸಿಎಂ ಕಚೇರಿ ಪೊಲೀಸ್ ನೋಟಿಸ್ ಸ್ವೀಕರಿಸಲಿಲ್ಲ ಎಂದು ಆರೋಪಿಸಿದ್ದರು. ಇಂದು ಅವರ ತಂತ್ರ ಬಯಲಾಗಿದೆ. ಪೊಲೀಸ್ ಎಸಿಪಿ ಅವರು ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಕಚೇರಿಗೆ ನೋಟಿಸು ನೀಡಿಲ್ಲ’’ ಎಂದು ಅವರು ‘x’ನಲ್ಲಿ ಬರೆದಿದ್ದಾರೆ.
ಅಪರಾಧ ವಿಭಾಗದ ತಂಡ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿದ ಹಾಗೂ ಅವರ ನಿವಾಸದಲ್ಲಿದ್ದ ಅಧಿಕಾರಿಗಳು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದ ಒಂದು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಕಳೆದ ವಾರ ಆಮ್ ಆದ್ಮಿ ಪಕ್ಷ ತನ್ನ ಏಳು ಶಾಸಕರಿಗೆ ಪಕ್ಷ ತ್ಯಜಿಸಲು ತಲಾ 25 ಕೋಟಿ ರೂ. ಆಮಿಷವನ್ನು ಬಿಜೆಪಿ ಒಡ್ಡಿದೆ ಹಾಗೂ ಕೇಜ್ರಿವಾಲ್ ಸರಕಾರವನ್ನು ಉರುಳಿಸಲು ಅದು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.