ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಅಲೋಕ್ ಜೋಶಿ ನೇಮಕ

ಅಲೋಕ್ ಜೋಶಿ | PC : X \ @RoyalRajputUp16
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ (ಎನ್ಎಸ್ಎಬಿ)ಯನ್ನು ಮರು ರೂಪಿಸಿದೆ.
ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ಆರ್ ಆ್ಯಂಡ್ ಎಡಬ್ಲು)ನ ಮಾಜಿ ಮುಖ್ಯಸ್ಥ ಅಲೋಕ್ ಜೋಶಿ ಅವರನ್ನು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ (ಎನ್ಎಸ್ಎಬಿ)ಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಇವರು ಭಾರತೀಯ ಸೇನೆ, ಪೊಲೀಸ್ ಹಾಗೂ ವಿದೇಶಾಂಗ ಸೇವೆಗಳ ನಿವೃತ್ತ ಹಿರಿಯ ಅಧಿಕಾರಿಗಳನ್ನು ಒಳಗೊಂಡ 7 ಸದಸ್ಯರ ಮಂಡಳಿಯನ್ನು ಮುನ್ನಡೆಸಲಿದ್ದಾರೆ.
ಈ ಮಂಡಳಿಯಲ್ಲಿ ವೆಸ್ಟರ್ನ್ ಏರ್ ಕಮಾಂಡರ್ನ ಮಾಜಿ ಏರ್ ಮಾರ್ಷಲ್ ಪಿ.ಎಂ. ಸಿನ್ಹಾ, ಸದರ್ನ್ ಆರ್ಮಿಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಹಾಗೂ ಶಸಸ್ತ್ರ ಪಡೆಯ ನಿವೃತ್ತ ಮಾಜಿ ಅಡ್ಮಿರಲ್ ಮಾಂಟಿ ಖನ್ನಾ ಒಳಗೊಂಡಿದ್ದಾರೆ.
ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿಗಳಾದ ರಾಜೀವ್ ರಂಜನ್ ವರ್ಮಾ ಹಾಗೂ ಮನಮೋಹನ್ ಸಿಂಗ್, ಭಾರತೀಯ ವಿದೇಶಾಂಗ ಸೇವೆಯ ನಿವೃತ್ತ ಅಧಿಕಾರಿ ಬಿ. ವೆಂಕಟೇಶ್ ವರ್ಮಾ ಕೂಡ ಈ ಮಂಡಳಿಯಲ್ಲಿ ಸೇರಿದ್ದಾರೆ.





