ಟ್ರಂಪ್ಗೆ ಹೆದರುವ ಮೋದಿಗೆ ಅಂಬಾನಿ, ಅದಾನಿ ರಿಮೋಟ್ ಕಂಟ್ರೋಲ್ : ರಾಹುಲ್ ಗಾಂಧಿ ವಾಗ್ದಾಳಿ

ರಾಹುಲ್ ಗಾಂಧಿ | Photo Credit : PTI
ಬೆಗುಸರಾಯ್,ನ.2: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಹೆದರುತ್ತಾರೆ ಮಾತ್ರವಲ್ಲ ಅವರನ್ನು ಅಂಬಾನಿ ಹಾಗೂ ಅದಾನಿ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಟೀಕಿಸಿದ್ದಾರೆ.
ಬಿಹಾರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಅವರು ಬೆಗುಸರಾಯಿ ಹಾಗೂ ಖಗಾರಿಯಾ ಜಿಲ್ಲೆಗಳಲ್ಲಿ ಸರಣಿ ರ್ಯಾಲಿಗಳನ್ನು ನಡೆಸಿದ ಸಂದರ್ಭ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘‘ ವಿಶಾಲವಾದ ಎದೆ ಇದ್ದ ಮಾತ್ರಕ್ಕೆ ನೀವು ಬಲಿಷ್ಠರಾಗುವುದಿಲ್ಲ. ಮಹಾತ್ಮಾಗಾಂಧೀಜಿಯವರನ್ನೇ ನೋಡಿ. ಕೃಶಕಾಯರಾಗಿದ್ದ ಅವರು, ಆ ಕಾಲದ ಸೂಪರ್ಪವರ್ ಆಗಿದ್ದ ಬ್ರಿಟಿಶರ ವಿರುದ್ಧ ಹೋರಾಡಿದ್ದರು. ಆದರೆ 56 ಇಂಚಿನ ಎದೆಯುಳ್ಳವನೆೆಂದು ಬಡಾಯಿಕೊಚ್ಚುವ ನರೇಂದ್ರ ಮೋದಿಯವರು, ಆಪರೇಶನ್ ಸಿಂಧೂರ್ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಕರೆ ಮಾಡಿದಾಗ ಭಯಭೀತರಾಗಿದ್ದರು. ಬಳಿಕ ಪಾಕಿಸ್ತಾನದ ಜೊತೆಗಿನ ಮಿಲಿಟರಿ ಸಂಘರ್ಷ ಎರಡು ದಿನಗಳಲ್ಲೇ ಕೊನೆಗೊಂಡಿತ್ತು. ಮೋದಿ ಅವರು ಟ್ರಂಪ್ಗೆ ಹೆದರುತ್ತಾರೆ ಮಾತ್ರವಲ್ಲದೆ, ಅವರನ್ನು ಅಂಬಾನಿ ಹಾಗೂ ಅದಾನಿ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೆ’’ ಎಂದು ರಾಹುಲ್ ವ್ಯಂಗ್ಯವಾಡಿದರು.
‘‘1971ರ ಬಾಂಗ್ಲಾ ವಿಮೋಚನಾ ಸಮರದ ಸಂದರ್ಭ ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಅಮೆರಿಕವು ಬೆದರಿಕೆ ಹಾಕಿದಾಗ, ಅವರು ಅಂಜಲಿಲ್ಲ ಹಾಗೂ ಏನು ಅಗತ್ಯವಿತ್ತೋ ಅದನ್ನು ಮಾಡಿದರು’’ ಎಂದರು.
ಆದರೆ ಆಪರೇಶನ್ಸಿಂಧೂರವನ್ನು ನಿಲ್ಲಿಸುವಂತೆ ಟ್ರಂಪ್ ಮೋದಿಯವರಿಗೆ ತಿಳಿಸಿದಾಗ, ಅವರು ಅದನ್ನು ಸ್ಥಗಿತಗೊಳಿಸಿಬಿಟ್ಟರು ಎಂದು ರಾಹುಲ್ ಟೀಕಿಸಿದರು.
ಜಿಎಸ್ಟಿ ಹಾಗೂ ನಗದು ಅಮಾನ್ಯೀಕರಣದಂತಹ ಮೋದಿ ಸರಕಾರದ ನಿರ್ಧಾರಗಳು ಸಣ್ಣ ಉದ್ಯಮಗಳನ್ನು ನಾಶಪಡಿಸುವ ಉದ್ದೇಶ ಹೊಂದಿದೆ ಹಾಗೂ ಬೃಹತ್ ಉದ್ಯಮಿಗಳಿಗೆ ಪ್ರಯೋಜನ ಮಾಡಿಕೊಡುತ್ತಿದೆ ಎಂದವರು ಆಪಾದಿಸಿದರು.
‘‘ಇಂಡಿಯಾ ಮೈತ್ರಿಕೂಟದ ನಿಲುವು ವಿಭಿನ್ನವಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ ‘‘ ನಾವು ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಬಯಸುತ್ತಿದ್ದೇವೆ. ನಿಮ್ಮ ಮೊಬೈಲ್ ಫೋನ್ಗಳಲ್ಲಿ ಹಾಗೂ ಟೀಶರ್ಟ್ಗಳಲ್ಲಿ ಮೇಡ್ ಇನ್ ಚೀನಾದ ಲೇಬಲ್ಗಳನ್ನು ತೆಗೆದು, ಮೇಡ್ ಇನ್ ಬಿಹಾರದ ಟ್ಯಾಗ್ಗಳನ್ನು ಹಾಕಲು ಬಯಸುತ್ತಿದ್ದೇವೆ’’ ಎಂದು ರ್ಯಾಲಿಯಲ್ಲಿ ಹೇಳಿದ್ದಾರೆ.
ಮತಗಳಿಕೆಗಾಗಿ ಮೋದಿ ಅವರು ಏನೂ ಮಾಡಲು ಸಿದ್ಧರಿರುವ ಮೋದಿ, ಚುನಾವಣೆವರೆಗೆ ನೀವು ಏನು ಹೇಳಿದ್ದೆಲ್ಲವನ್ನು ಮಾಡುತ್ತಾರೆ. ಚುನಾವಣೆಯ ಆನಂತರ ಅವರು ತನ್ನ ಅಚ್ಚುಮೆಚ್ಚಿನ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾತ್ರವೇ ದುಡಿಯುತ್ತಿರುತ್ತಾರೆ ಎಂದರು.







