ಉತ್ತರ ಪ್ರದೇಶ | ಬಲಿಯಾದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿಗೈದ ದುಷ್ಕರ್ಮಿಗಳು

ಅಂಬೇಡ್ಕರ್ ಪ್ರತಿಮೆ | PC ; PTI
ಬಲಿಯಾ,ನ.28: ಅಪರಿಚಿತ ದುಷ್ಕರ್ಮಿಗಳು ಇಲ್ಲಿಯ ಗದ್ವಾರ್ ನಲ್ಲಿರುವ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು ಎಂದು ಪೋಲಿಸರು ಶುಕ್ರವಾರ ತಿಳಿಸಿದರು.
ಅಧಿಕಾರಿಗಳ ಪ್ರಕಾರ ಗದ್ವಾರ್-ನಾಗ್ರಾ ರೋಡ್ ನಲ್ಲಿಯ ರಾಮಪುರ ಅಸ್ಲಿ ಗ್ರಾಮದಲ್ಲಿ ಸ್ಥಾಪಿತ ಪ್ರತಿಮೆಯ ಕೈಬೆರಳು ಮುರಿದಿರುವುದು ಬುಧವಾರ ರಾತ್ರಿ ಪತ್ತೆಯಾಗಿತ್ತು.
ಇದು ಈ ಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಗುರಿಯಾಗಿಸಿಕೊಂಡು ಧ್ವಂಸದ ಐದನೇ ಘಟನೆಯಾಗಿದ್ದು, ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಉಪ ವಿಭಾಗಾಧಿಕಾರಿ ರವಿಕುಮಾರ್ ಮತ್ತು ಹಿರಿಯ ಪೋಲಿಸ್ ಹಾಗೂ ಆಡಳಿತಾತ್ಮಕ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮಸ್ಥರು ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ,ರಕ್ಷಣಾತ್ಮಕ ಗಡಿ ಗೋಡೆಯನ್ನು ನಿರ್ಮಿಸುವಂತೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಗ್ರಹಿಸಿ ಐದು ಅಂಶಗಳ ಅಹವಾಲನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ ಅಧಿಕಾರಿಗಳು,ಶಾಂತಿಯನ್ನು ಕಾಯ್ದುಕೊಳ್ಳುವಂತೆ ಕೋರಿಕೊಂಡಿದ್ದಾರೆ.
ಹಾನಿಗೀಡಾದ ಪ್ರತಿಮೆಯನ್ನು ದುರಸ್ತಿ ಮಾಡಲಾಗಿದೆ ಮತ್ತು ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರಿಸ್ಥಿತಿಯು ಶಾಂತಿಯುತವಾಗಿದ್ದು,ನಿಯಂತ್ರಣದಲ್ಲಿದೆ ಎಂದು ಪೋಲಿಸರು ತಿಳಿಸಿದರು.
ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.







